ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್, ನನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಆರೋಪ ಮಾಡಲಾಗಿದೆ. ಕೊಲೆ ಪ್ರಕರಣದಲಿ ನನ್ನ ಪಾತ್ರವಿಲ್ಲ ಎಂದಿದ್ದಾರೆ.
ಬೆಂಗಳೂರಿನ ಭಾರತಿನಗರ ಠಾಣೆಯಲ್ಲಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಭೈರತಿ ಬಸವರಾಜ್, ಕೊಲೆ ಆರೋಪಿಗಳಿಗೂ ನನಗೂ ಯಾವುದೇ ಪರಿಚಯವೂ ಇಲ್ಲ. ದುರುದ್ದೇಶಪೂರ್ವಕವಾಗಿ ನನ್ನ ವಿರುದ್ಧ ಆರೋಪ ಮಾಡಲಾಗಿದೆ ಎಂದರು.
ನನ್ನಿಂದಲೇ ಬಿಫಾರಂ ಪಡೆದು ಚುನಾವಣೆಗೆ ನಿಂತವರಿಂದ ಪ್ರತಿಭಟನೆ ನಡೆಯುತ್ತಿದೆ. ನಾನೊಬ್ಬ ಪ್ರಾಮಾಣಿಕ ರಾಜಕಾರಣಿ. ಇಂತಹ ಹೀನ ಕೃತ್ಯ ಮಾಡಲ್ಲ ಎಂದು ಹೇಳಿದರು.
ಕಾಣದ ಕೈಗಳು ಈ ಪ್ರಕರಣದಲ್ಲಿ ನನ್ನ ಸಿಲುಕಿಸಲು ಪ್ರಯತ್ನಿಸುತ್ತಿವೆ. ಈ ಭೈರತಿ ಬಸವರಾಜ್ ಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದರು. ಪೊಲೀಸರು ನೋಟಿಸ್ ನೀಡಿದಾಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.