ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು, ಟಿಕೆಟ್ ಆಕಾಂಕ್ಷಿಗಳು ರಾಜಕೀಯ ಪಕ್ಷಗಳ ನಾಯಕರ ಮನವೊಲಿಕೆಗಾಗಿ ಭಾರಿ ಸರ್ಕಸ್ ನಡೆಸಿದ್ದಾರೆ. ಈ ನಡುವೆ ಆರ್ ಜೆಡಿ ಟಿಕೆಟ್ ಆಕಾಂಕ್ಷಿಯೊಬ್ಬ ಟಿಕೆಟ್ ಕೈತಪ್ಪಿದ್ದಕ್ಕೆ ಬಟ್ಟೆ ಹರಿದುಕೊಂಡು ಗೋಳಾಡಿರುವ ಘಟನೆ ನಡೆದಿದೆ.
ಮದನ್ ಸಾಹ್ ಎಂಬುವವರು ಆರ್ ಜೆಡಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೇಕ್ಷಣದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದರಿಂದ ನೊಂದ ಮದನ್ ಸಾಹ್ ಬಟ್ಟೆ ಹರಿದುಕೊಂಡು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ನಿವಾಸಮ ಮುಂದೆ ರಸ್ತೆಯಲ್ಲಿ ಉರುಳಾಡಿ ಕಣ್ಣೀರಿಟ್ಟು ಗೋಳಾಡಿದ್ದಾರೆ.
ಹಣ ಪಡೆದುಕೊಂಡು ನನಗೆ ಟಿಕೆಟ್ ನಿರಾಕರಿಸಲಾಗಿದೆ. ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಕೊನೇ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿರುವುದು ಸರಿಯಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ನನ್ನ ಬಳಿ ಟಿಕೆಟ್ ಗಾಗಿ 2.70 ಕೋಟಿ ಕೇಳಿದ್ದರು. ನನ್ನ ಮಕ್ಕಳ ಮದುವೆ ಮುಂದೂಡಿ ಹಣ ಹೊಂದಿಸಿದ್ದೆ. ಈಗ ಟಿಕೆಟ್ ಕೊಟ್ಟಿಲ್ಲ. ಕೊನೆ ಪಕ್ಷ ನನ್ನಿಂದ ತೆಗೆದುಕೊಂಡಿರುವ ಹಣವನ್ನಾದರೂ ವಾಪಸ್ ಕೊಡಲಿ ಎಂದು ಗೋಳಾಡಿದ್ದಾರೆ. ಮದನ್ ಸಾಹ್ 2020ರಲ್ಲಿ ಆರ್ ಜೆಡಿಯಿಂದ ಮಧುಬನ್ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತಿದ್ದರು. ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು.