ಬೆಂಗಳೂರು: ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುವವರ ವಿರುದ್ಧ ದೂರು ದಾಖಲಿಸಿ ಅವರ ಡ್ರೈವಿಂಗ್ ಲೈಸೆನ್ಸ್ ಕಾಯಂ ಆಗಿ ರದ್ದು ಮಾಡುವಂತೆ ಸಾರಿಗೆ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದ್ದಾರೆ.
ಬುಧವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾರಾಂತ್ಯದಲ್ಲಿ ಬಳ್ಳಾರಿ ರಸ್ತೆಯ ಮೇಲ್ಸೇತುವೆ, ಕುಣಿಗಲ್ ರಸ್ತೆ ಸೇರಿದಂತೆ ಹಲವು ಕಡೆ ಯುವಕರು ವ್ಹೀಲಿಂಗ್ ಮಾಡುತ್ತಿದ್ದು, ಸಾರ್ವಜನಿಕ ವಾಹನಗಳಿಗೆ ತೊಂದರೆಯಾಗುತ್ತಿದೆ. ಇಂತಹ ವ್ಹೀಲಿಂಗ್ ಮಾಡುವ ವಾಹನ ಚಾಲಕರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅವರ ಡಿಎಲ್ ಮತ್ತು ನೋಂದಣಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಸೂಚಿಸಿದ್ದಾರೆ.
ಶಾಲಾ ಮಕ್ಕಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಶಾಲಾ ವಾಹನಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆದೊಯ್ಯದಂತೆ ತಿಳಿಸಬೇಕು. ಅಪಘಾತ ಸಂಭವಿಯ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಎಚ್ಚರಿಕೆ ಫಲಕ ಅಳವಡಿಸಬೇಕು ಎಂದು ಹೇಳಿದ್ದಾರೆ.