ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ಶೇಕಡ 10ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಂದ ಬೇಡಿಕೆ ಬಂದಿದ್ದು, ಶೇಕಡ 7ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಸಮ್ಮತಿಸುವ ಸಾಧ್ಯತೆ ಇದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ವಿವಿಧ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಶುಲ್ಕವನ್ನು 2024- 25ನೇ ಶೈಕ್ಷಣಿಕ ಸಾಲಿನಲ್ಲಿ ಶೇಕಡ 10 ರಷ್ಟು ಹೆಚ್ಚಳ ಮಾಡಲಾಗಿತ್ತು.
ವೇತನ ಹೆಚ್ಚಳ, ಕಾಲೇಜುಗಳಲ್ಲಿ ಮೂಲಸೌಕರ್ಯ ಸುಧಾರಣೆ, ನಿರ್ವಹಣೆ, ಗುಣಮಟ್ಟ ಪರಿಗಣನೆ ನಡೆಸಿ 2025- 26 ನೇ ಸಾಲಿನಲ್ಲಿಯೂ ಶೇಕಡ 10ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡುವಂತೆ ಕರ್ನಾಟಕ ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ ಮನವಿ ಮಾಡಿದೆ,
ಶೇಕಡ 7ರಷ್ಟು ಶುಲ್ಕ ಹೆಚ್ಚಳ ಮಾಡಲು ಅವಕಾಶ ನೀಡುವುದಾಗಿ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರಿ ಕೋಟಾದ ಸೀಟುಗಳಿಗೆ ಖಾಸಗಿ ಕಾಲೇಜುಗಳ ಶುಲ್ಕ 1.06 ಲಕ್ಷ ರೂ., ಕಾಮೆಡ್ –ಕೆ(ಟೈಪ್ -1) ಶುಲ್ಕ 1.86 ಲಕ್ಷ ರೂಪಾಯಿ ಇದೆ. ಕಾಮೆಡ್ –ಕೆ(ಟೈಪ್-2) ಶುಲ್ಕ 2.61 ಲಕ್ಷ ರೂ. ಇದೆ.