BIG NEWS: ಎಸ್.ಬಿ.ಐ.ಗೆ ಬಿಗ್‌ ಶಾಕ್, ಲಾಭದಲ್ಲಿ ಭಾರೀ ಕುಸಿತ…!

ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಲಾಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿವ್ವಳ ಲಾಭ ಶೇ.35ರಷ್ಟು ಕುಸಿತ ಕಂಡಿದ್ದು, 9,164 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭ 14,205 ಕೋಟಿ ರೂಪಾಯಿ ಇತ್ತು.

2023ರ ಡಿಸೆಂಬರ್‌ನಲ್ಲಿ ಪೂರ್ಣಗೊಂಡ ತ್ರೈಮಾಸಿಕದಲ್ಲಿ ಎಸ್‌ಬಿಐನ ಒಟ್ಟು ಆದಾಯ 1,18,193 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 98,084 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ಈ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಬಡ್ಡಿ ಆದಾಯ 1,06,734 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 86,616 ಕೋಟಿ ರೂಪಾಯಿ ಇತ್ತು. 2023ರ ಡಿಸೆಂಬರ್‌ ಅಂತ್ಯದ ವೇಳೆಗೆ, ಬ್ಯಾಂಕಿನ NPA ಸಂಪೂರ್ಣ ಸಾಲದ 2.42 ಪ್ರತಿಶತದಷ್ಟು ಕಡಿಮೆಯಾಗಿದೆ. ವರ್ಷದ ಹಿಂದೆ ಇದು ಶೇ.3.14ರಷ್ಟಿತ್ತು.

ಅಂತೆಯೇ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ನಿವ್ವಳ ಎನ್‌ಪಿಎ ಸಹ ಶೇ.0.64ಕ್ಕೆ ಇಳಿದಿದೆ. ಇದು ಕಳೆದ ವರ್ಷ ಶೇ.0.77ರಷ್ಟಿತ್ತು. ಒಟ್ಟಾರೆಯಾಗಿ 2023 ಡಿಸೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಎಸ್‌ಬಿಐ ಗ್ರೂಪ್‌ನ ನಿವ್ವಳ ಲಾಭವು ಶೇ.29 ರಷ್ಟು ಕುಸಿದು 11,064 ಕೋಟಿ ರೂಪಾಯಿ ಆಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಲಾಭ 15,477 ಕೋಟಿ ರೂಪಾಯಿಯಷ್ಟಿತ್ತು.

ಆದರೆ ಈ ಅವಧಿಯಲ್ಲಿ ಒಟ್ಟು ಆದಾಯ 1,53,072 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಆದಾಯ 1,27,219 ಕೋಟಿ ರೂಪಾಯಿ ಇತ್ತು. ಕಳೆದ ತ್ರೈಮಾಸಿಕದಲ್ಲಿ, ಪೆನ್ಷನ್‌ ಫಂಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ SBI ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್‌ನ ಸಂಪೂರ್ಣ 20 ಪ್ರತಿಶತ ಪಾಲನ್ನು ಬ್ಯಾಂಕ್ ತೆಗೆದುಕೊಂಡಿದೆ.

ಇದರೊಂದಿಗೆ ಎಸ್‌ಬಿಐ ಪೆನ್ಷನ್ ಫಂಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬ್ಯಾಂಕ್‌ನ ಪಾಲು 60 ಪ್ರತಿಶತದಿಂದ 80 ಪ್ರತಿಶತಕ್ಕೆ ಏರಿತು. 229.52 ಕೋಟಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಸ್‌ಬಿಐ ಲಾಭದಲ್ಲಿ ಇಳಿಕೆಯಿಂದಾಗಿ ಸೋಮವಾರ ಷೇರು ಪೇಟೆಯಲ್ಲಿ ಏರಿಳಿತಗಳಾಗಬಹುದು. ಎಸ್‌ಬಿಐ ಷೇರುಗಳ ಮೌಲ್ಯ ಇಳಿಕೆಯಾಗುವ ಸಾಧ್ಯತೆಯೂ ಇದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read