ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ವತಿಯಿಂದ ಇಪಿಎಸ್ -95 ಯೋಜನೆಯಡಿ ಪ್ರಸ್ತುತ ನಿವೃತ್ತ ನೌಕರರಿಗೆ ನೀಡುತ್ತಿರುವ ಮಾಸಿಕ ಕನಿಷ್ಠ ಪಿಂಚಣಿಯನ್ನು 1000 ರೂ. ನಿಂದ 7,500 ರೂ.ಗೆ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಂಸತ್ ನಲ್ಲಿ ಮಹಾರಾಷ್ಟ್ರದ ಕಾಂಗ್ರೆಸ್ ಸಂಸದ ಸುರೇಶ್ ಗೋಪಿನಾಥ್ ಮಾತ್ರೆ ಅವರು ಬೆಲೆ ಏರಿಕೆ ಹೊರತಾಗಿಯೂ 2014 ರಿಂದ ಕನಿಷ್ಠ ಪಿಂಚಣಿ ಒಂದು ಸಾವಿರ ರೂಪಾಯಿ ಮಟ್ಟದಲ್ಲಿಯೇ ಇದೆ. ಕನಿಷ್ಠ ಪಿಂಚಣಿ ಏರಿಕೆ ಬಗ್ಗೆ ಬಹುದಿನಗಳ ಬೇಡಿಕೆ ಈಡೇರಿಸುವ ಕುರಿತು ಸರ್ಕಾರದಿಂದ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವರಾದ ಶೋಭಾ ಕರಂದ್ಲಾಜೆ ಉತ್ತರ ನೀಡಿ, ಮಾಸಿಕ ಕನಿಷ್ಠ ಪಿಂಚಣಿ ಹೆಚ್ಚಳದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.
ಹಣದುಬ್ಬರ ಹಿನ್ನೆಲೆಯಲ್ಲಿ ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುವ ಸಾಧ್ಯತೆಯನ್ನು ಕೂಡ ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಇದರಿಂದಾಗಿ ಕನಿಷ್ಠ ಪಿಂಚಣಿ 1 ಸಾವಿರದಿಂದ 7500 ರೂ.ವರೆಗೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನಿವೃತ್ತ ನೌಕರರಿಗೆ ನಿರಾಸೆಯಾಗಿದೆ.
