ಬೆಂಗಳೂರು: ಬಹುತೇಕ ಖಾಸಗಿ ಶಾಲೆಗಳಲ್ಲಿ 2025-26ರ ಶೈಕ್ಷಣಿಕ ಸಾಲಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಲಾಗಿದೆ.
ಅನೇಕ ಅನುದಾನ ರಹಿತ ಶಾಲೆಗಳಲ್ಲಿ ಶೇಕಡ 15 ರಿಂದ 20 ರಷ್ಟು ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಪೋಷಕರಿಗೆ ಹೆಚ್ಚಿನ ಶುಲ್ಕದ ಹೊರೆ ಬಿದ್ದಿದೆ. ಪ್ರತಿವರ್ಷ ಶಾಲೆಗಳಲ್ಲಿ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ, ಡೀಸೆಲ್ ಬೆಲೆ ಏರಿಕೆ ಮೊದಲಾದ ಕಾರಣಗಳಿಂದ ಪ್ರವೇಶ ಶುಲ್ಕದಲ್ಲಿ 15 ರಿಂದ 20 ರಷ್ಟು ಹೆಚ್ಚಳ ಮಾಡುವುದಾಗಿ ಖಾಸಗಿ ಶಾಲೆಗಳು ಹೇಳುತ್ತಿವೆ.
ರಾಜ್ಯ ಸರ್ಕಾರ ಡೀಸೆಲ್ ಬೆಲೆ ಹೆಚ್ಚಿಸಿದೆ. ವಾಹನಗಳ ವಿಮಾ ಮೊತ್ತ ಹೆಚ್ಚಾಗಿದೆ. ಶಿಕ್ಷಣ ಸಂಸ್ಥೆಗಳಿಗೂ ಕಸದ ತೆರಿಗೆ ಹಾಕಲಾಗುತ್ತಿದ್ದು, ನೀರಿನ ದರ ಹೆಚ್ಚಳ ಮಾಡಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಿಗೆ ವಾಣಿಜ್ಯ ಉದ್ಯಮಗಳಿಗೆ ಇರುವ ದರದಲ್ಲಿ ತೆರಿಗೆ ವಸೂಲಿ ಮಾಡುತ್ತಿದ್ದು, ಶಾಲೆಗಳ ನಿರ್ವಹಣೆ, ಸಿಬ್ಬಂದಿ, ಶಿಕ್ಷಕರು, ಚಾಲಕರ ವೇತನ ಹೆಚ್ಚಳ ಕಾರಣದಿಂದ ಶುಲ್ಕ ಹೆಚ್ಚಳ ಅನಿವಾರ್ಯ ಎಂದು ಖಾಸಗಿ ಶಾಲೆಗಳ ಸಂಘಟನೆಗಳ ಪ್ರತಿನಿಧಿಗಳು ಹೇಳಿದ್ದಾರೆ. ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿರುವುದರಿಂದ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವು ಕಡೆ ಪ್ರತಿಭಟನೆ ಕೂಡ ನಡೆಸಲಾಗಿದೆ.