ಬೆಂಗಳೂರು: ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರ ಹೆಚ್ಚಳವಾಗಿದೆ. ಕೆಲವು ದಿನಗಳ ಹಿಂದೆ ಒಂದು ಮಟ್ಟಿಗೆ 6 ರೂಪಾಯಿ ಇದ್ದ ದರ ಈಗ 8 ರೂಪಾಯಿಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದರಿಂದ ಮಾರಾಟ ಹೆಚ್ಚಾಗುವ ಜೊತೆಗೆ ದರ ಕೂಡ ಹೆಚ್ಚಳವಾಗುತ್ತದೆ. ಪ್ರಸ್ತುತ ಒಂದು ಮೊಟ್ಟೆ ದರ 6.90 ರೂ.ನಿಂದ 7.50 ರೂ. ಇದ್ದು, ಕೆಲವೆಡೆ 8 ರೂಪಾಯಿವರೆಗೂ ಮಾರಾಟವಾಗುತ್ತಿವೆ.
ಹೊಸ ವರ್ಷ, ಕ್ರಿಸ್ಮಸ್ ಸಂದರ್ಭದಲ್ಲಿ ಕೇಕ್ ತಯಾರಿಸಲು ಮೊಟ್ಟೆ ಬಳಕೆ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆ ಆಗದ ಕಾರಣ ದರ ಹೆಚ್ಚಳವಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಮೊಟ್ಟೆಯನ್ನು ಗೋವಾ, ಮಹಾರಾಷ್ಟ್ರ, ಕೇರಳಕ್ಕೂ ಪೂರೈಕೆ ಮಾಡಲಾಗುತ್ತದೆ. ಮೊಟ್ಟೆ ಆಧರಿಸಿದ ಉತ್ಪನ್ನಗಳ ತಯಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಬಳಕೆಯಾಗುತ್ತದೆ. ಇನ್ನು ತಮಿಳುನಾಡಿನಿಂದ ರಾಜ್ಯಕ್ಕೆ ಪೂರೈಕೆ ಆಗುತ್ತಿರುವ ಮೊಟ್ಟೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮೊಟ್ಟೆಯ ದರ ಹೆಚ್ಚಳವಾಗಿದೆ ಎನ್ನಲಾಗಿದೆ.
