ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಆಸೆಗೆ ಸದ್ಯಕ್ಕೆ ತಣ್ಣೀರೆರಚಿದಂತಾಗಿದೆ. ಮೂಲಗಳ ಪ್ರಕಾರ, ಹಣಕಾಸು ಸಚಿವಾಲಯವು 2025-26ನೇ ಹಣಕಾಸು ವರ್ಷದಲ್ಲಿ (FY26) ಐದು ದಿನಗಳ ಬ್ಯಾಂಕಿಂಗ್ ವಾರದ ಪ್ರಸ್ತಾವಿತ ನೀತಿಯನ್ನು ಜಾರಿಗೊಳಿಸದಿರಲು ನಿರ್ಧರಿಸಿದೆ. ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಸಂಭವನೀಯ ಅಡಚಣೆಗಳನ್ನು ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, “ಭಾರತೀಯ ಬ್ಯಾಂಕಿಂಗ್ ಅಸೋಸಿಯೇಷನ್ (ಐಬಿಎ) ನೊಂದಿಗೆ ಚರ್ಚೆಗಳು ನಡೆಯುತ್ತಿದ್ದರೂ, ಐದು ದಿನಗಳ ಬ್ಯಾಂಕಿಂಗ್ ಉಪಕ್ರಮವು ಈ ವರ್ಷ ಕಾರ್ಯರೂಪಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ” ಎಂದಿದ್ದಾರೆ.
ಅಲ್ಲದೆ, “ಅಂತಹ ಬದಲಾವಣೆಯು ಬ್ಯಾಂಕಿಂಗ್ ಸೇವೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಏಕೆಂದರೆ ಶನಿವಾರ ಅನೇಕ ಗ್ರಾಹಕರಿಗೆ ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಪೂರ್ಣಗೊಳಿಸಲು ಪ್ರಮುಖ ದಿನವಾಗಿದೆ. ಅನೇಕ ಗ್ರಾಹಕರು ತಮ್ಮ ಭೌತಿಕ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಶನಿವಾರದಂದು ಶಾಖೆಗಳಿಗೆ ಭೇಟಿ ನೀಡಲು ಬಯಸುತ್ತಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ಸದ್ಯಕ್ಕೆ ಐದು ದಿನಗಳ ಬ್ಯಾಂಕಿಂಗ್ ವಾರವನ್ನು ಜಾರಿಗೊಳಿಸುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರಕ್ಕೆ ಬಂದಿರುವಂತೆ ತೋರುತ್ತಿದೆ. ಬ್ಯಾಂಕ್ ಉದ್ಯೋಗಿಗಳು ತಮ್ಮ ವಾರದ ರಜೆಗಳಿಗಾಗಿ ಇನ್ನಷ್ಟು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.