ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ನಟ ದರ್ಶನ್ & ಗ್ಯಾಂಗ್ ಗೆ ಬಿಗ್ ಶಾಕ್ ಎದುರಾಗಿದೆ. ಕೊಲೆ ಆರೋಪಿ ನಟ ದರ್ಶನ್ ಮತ್ತು ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಹೈಕೋರ್ಟ್‌ನ ನಿರ್ಧಾರವು “ಗಂಭೀರ ಕಾನೂನು ದೌರ್ಬಲ್ಯ” ದಿಂದ ಕೂಡಿದೆ ಎಂದು ಹೇಳಿದೆ.
ಜಾಮೀನು ನೀಡುವ ಮೊದಲು ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಉದ್ದೇಶಿಸಲಾದ ಪ್ರಕ್ರಿಯೆಯಾದ ಸಾಕ್ಷಿ ಹೇಳಿಕೆಗಳನ್ನು ಪರಿಶೀಲಿಸಿದೆ ಎಂದು ನ್ಯಾಯಾಧೀಶರು ಗಮನಿಸಿದರು. “ಜಾಮೀನು ನೀಡಲು ಯಾವುದೇ ಕಾನೂನು ಕಾರಣವಿಲ್ಲ” ಎಂದು ಹೇಳಿದ ಪೀಠ, ದರ್ಶನ್ ಅವರ ಸ್ವಾತಂತ್ರ್ಯವು “ನ್ಯಾಯದ ಆಡಳಿತವನ್ನು ಹಳಿತಪ್ಪಿಸುವ ಅಪಾಯವನ್ನುಂಟುಮಾಡಿದೆ” ಎಂದು ಹೇಳಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ಧತಿ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ.
ದರ್ಶನ್ ಗೆ ಹೈಕೋರ್ಟ್ ನೀಡಿದ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಸದಸ್ಯ ಪೀಠ ವಾದ ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು.
ಕಳೆದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ಸಲ್ಲಿಸಿದ ದಾಖಲೆ ಪರಿಶೀಲಿಸಲಾಗಿದೆ. ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಕಾಣುತ್ತಿದೆ. ಜಾಮೀನು ನೀಡಲು ಒಂದು ಸಣ್ಣ ಅಂಶ ಸಿಕ್ಕರೆ ಸಾಕು ಎನ್ನುವಂತೆ ನಮಗೆ ಅನ್ನಿಸುತ್ತಿದೆ. ಹೈಕೋರ್ಟ್ ಜಾಮೀನು ನೀಡುವಾಗ ವಿವೇಚನೆ ಬಳಸಿಲ್ಲ ಎಂದು ನ್ಯಾಯಮೂರ್ತಿ ಪರ್ದಿವಾಲಾ ಅಭಿಪ್ರಾಯಪಟ್ಟಿದ್ದರು.