ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಓಸಿ, ಸಿಸಿ ಇಲ್ಲದೆ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಒಂದು ಸಲದ ಪರಿಹಾರವಾಗಿ ವಿನಾಯಿತಿ ನೀಡಿ ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸುವ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಓಸಿ, ಸಿಸಿ ಇಲ್ಲದೆ ವಿದ್ಯುತ್, ನೀರು, ಒಳ ಚರಂಡಿ ಸಂಪರ್ಕ ನೀಡದಂತೆ 2024ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದರಂತೆ ಎಸ್ಕಾಂಗಳು 2025ರ ಮಾರ್ಚ್ ನಿಂದ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಈ ರೀತಿ ರಾಜ್ಯಾದ್ಯಂತ ಲಕ್ಷಾಂತರ ಕಟ್ಟಡಗಳಿದ್ದು, ಈ ರೀತಿ ಓಸಿ, ಸಿಸಿ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ಒಂದು ಬಾರಿ ವಿನಾಯಿತಿ ನೀಡಿ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ನೀಡುವ ಬಗ್ಗೆ ನಿನ್ನೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
2025 ರ ಮಾರ್ಚ್ ಗೆ ಮೊದಲು ನಿರ್ಮಾಣವಾಗಿರುವ ಅಥವಾ ನೀರು, ವಿದ್ಯುತ್ ಗೆ ಅರ್ಜಿ ಸಲ್ಲಿಸಿರುವ ಕಟ್ಟಡಗಳಿಗೆ ಸುಗ್ರೀವಾಜ್ಞೆಯ ಮೂಲಕ ಒಂದು ಸಲ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಈ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎನ್ನಲಾಗಿದೆ.