ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಡಿಸೆಂಬರ್ 19ರ ವರೆಗೆ ನಡೆಯಲಿದೆ. ನಾಗರೀಕ ಅಣು ಕ್ಷೇತ್ರದಲ್ಲಿ ಖಾಸಗಿಯವರಿಗೂ ಅವಕಾಶ ನೀಡುವ ವಿಧೇಯಕ ಸೇರಿದಂತೆ 10 ವಿವಿಧ ಮಸೂದೆಗಳ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ.
ಅಧಿವೇಶನದಲ್ಲಿ ಆಟೋಮಿಕ್ ಎನರ್ಜಿ ಬಿಲ್ -2025 ಮಹತ್ವದ್ದಾಗಿದೆ. ಖಾಸಗಿ ಸಂಸ್ಥೆಗಳಿಗೆ ಅಣು ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶ ನೀಡಲಿದೆ.
ಪಾರದರ್ಶಕ ವ್ಯವಸ್ಥೆಯ ಮಾನ್ಯತೆ ಹಾಗೂ ಸ್ವಾಹಿತ್ಯ ಮೂಲಕ ವಿವಿಗಳು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವತಂತ್ರ ಸ್ವಯಂ ಆಡಳಿತದ ಸಂಸ್ಥೆಗಳಾಗಿ ಪರಿವರ್ತಿಸಲು ಆಗುವ ರೀತಿಯಲ್ಲಿ ಆಯೋಗವೊಂದನ್ನು ರಚಿಸಲು ಅವಕಾಶ ನೀಡುವ ಭಾರತೀಯ ಉನ್ನತ ಶಿಕ್ಷಣ ಆಯೋಗ ವಿಧೇಯಕವನ್ನು ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸಲು ಸಜ್ಜಾಗಿದೆ.
ರಾಷ್ಟ್ರೀಯ ಹೆದ್ದಾರಿಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರಗತಿ ಮತ್ತು ಪಾರದರ್ಶಕವಾಗಿ ನಡೆಸಲು ರಾಷ್ಟ್ರೀಯ ಹೆದ್ದಾರಿಗಳ ತಿದ್ದುಪಡಿ ವಿಧೇಯಕ, ಕಂಪನಿಗಳ ಕಾಯ್ದೆಯಲ್ಲಿ ಸುಧಾರಣೆಗೆ ಅವಕಾಶ ಕಲ್ಪಿಸುವ ಕಾರ್ಪೊರೇಟ್ ಕಾನೂನುಗಳ ತಿದ್ದುಪಡಿ ವಿಧೇಯಕ, ಸೆಕ್ಯೂರಿಟೀಸ್ ಮಾರ್ಕೆಟ್ಸ್ ಕೋಡ್ ಬಿಲ್, ಕಳೆದ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ಬಾಕಿ ಇದ್ದ ಎರಡು ವಿಧೇಯಕಗಳು ಮತ್ತು ಮೊದಲ ಪೂರಕ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.
