ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ರದ್ದುಪಡಿಸಿದ ತೀರ್ಪಿನಲ್ಲಿ ಅವರ ನಡವಳಿಕೆ ಉಲ್ಲೇಖಿಸಲಾಗಿದೆ.
ವೈದ್ಯಕೀಯ ದಾಖಲೆ, ಜಾಮೀನು ಬಳಿಕ ದರ್ಶನ್ ವರ್ತನೆಯನ್ನು ಗಮನಿಸಿದ್ದೇವೆ. ಜಾಮಿನಿಗಾಗಿ ಅನಾರೋಗ್ಯದ ಉತ್ಪ್ರೇಕ್ಷಿತ ತಪ್ಪು ಮಾಹಿತಿ ನೀಡಲಾಗಿದೆ. ವರದಿಯಲ್ಲಿ ಡಯಾಬಿಟಿಸ್, ರಕ್ತದೊತ್ತಡ, ಹೃದಯ ಸಮಸ್ಯೆ ಎಂದು ಉಲ್ಲೇಖಿಸಲಾಗಿದೆ. ಆದರೆ, ತುರ್ತು ವೈದ್ಯಕೀಯ ಸೇವೆ ಪ್ರಾಣಾಪಾಯದ ಕಾರಣಗಳಿರಲಿಲ್ಲ. ಜೈಲಿನ ಆಸ್ಪತ್ರೆಯಲ್ಲಿ ಗುಣಪಡಿಸಲಾಗದ ಕಾಯಿಲೆಯ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ.
ಜಾಮೀನು ದೊರೆತ ಬಳಿಕ ಆರೋಗ್ಯ ಪೂರ್ಣ ನಡವಳಿಕೆಯನ್ನು ದರ್ಶನ್ ತೋರಿಸಿದ್ದಾರೆ. ಸಾರ್ವಜನಿಕರ, ದೊಡ್ಡವರ ಕಾರ್ಯಕ್ರಮಗಳಲ್ಲಿ ಹಲವು ಸಲ ಭಾಗವಹಿಸಿದ್ದಾರೆ. ಬಿಡುಗಡೆಯ ನಂತರ ಯಾವುದೇ ರೀತಿಯ ಸರ್ಜರಿ ಮಾಡಿಸಿಕೊಂಡಿಲ್ಲ. ಅಲ್ಲದೆ, ಸುಳ್ಳು ಮಾಹಿತಿ ನೀಡಿ ಜಾಮೀನಿನ ದುರುಪಯೋಗಕ್ಕೆ ಇದು ಸಾಕ್ಷಿಯಾಗಿದೆ. ನ್ಯಾಯಾಂಗ ಬಂಧನದಲ್ಲಿಯೇ ಚಿಕಿತ್ಸೆ ಆಗಲ್ಲವೆಂಬುದನ್ನು ಮನವರಿಕೆ ಮಾಡಿಲ್ಲ. ಹೀಗಾಗಿ ಹೈಕೋರ್ಟ್ ಜಾಮೀನು ಕಾನೂನಿನಡಿ ಊರ್ಜಿತವಾಗುವುದಿಲ್ಲ ಎನ್ನಲಾಗಿದೆ.
ಸಾಕ್ಷಯ ನಾಶದಲ್ಲಿಯೂ ದರ್ಶನ್ ಪಾತ್ರವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಕೊಲೆಗೆ ಸಂಬಂಧವಿಲ್ಲದವರನ್ನು ಸರೆಂಡರ್ ಮಾಡಿಸಿದ್ದಾರೆ. ಕೊಲೆಯನ್ನು ಮುಚ್ಚಿಡಲು ಹಣವನ್ನು ನೀಡಿದ್ದಾರೆ. ದರ್ಶನ್ ಪೊಲೀಸರೊಂದಿನ ಸಂಪರ್ಕ ಉಪಯೋಗಿಸಿ ತನಿಖೆ ವಿಳಂಬವಾಗುವಂತೆ ಮಾಡಿದ್ದಾರೆ. ಪವಿತ್ರಾ ಗೌಡ ಮನೆಯ ಸಿಸಿಟಿವಿ ಸಾಕ್ಷ್ಯ ನಾಶಪಡಿಸಿದ್ದಾರೆ. ಸಾಕ್ಷಿಗಳೊಂದಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವೆಲ್ಲ ತನಿಖೆಯಲ್ಲಿ ದರ್ಶನ್ ಹಸ್ತಕ್ಷೇಪವೆಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ.