ಬೆಂಗಳೂರು : ಯುಪಿಐ ಬಳಕೆ ನಿಲ್ಲಿಸಿದ ವರ್ತಕರಿಗೆ ಶಾಕ್ ಎದುರಾಗಿದ್ದು, ಫೋನ್ ಪೇ ಬಿಟ್ಟು ಕ್ಯಾಶ್ ಪಡೆದ್ರೂ ಟ್ಯಾಕ್ಸ್ ಕಟ್ಟಬೇಕು. ಹೌದು. ಯುಪಿಐ ಬದಲು ನಗದು ರೂಪದಲ್ಲೇ ಹಣ ಸ್ವೀಕಾರ ಮಾಡಿದರೂ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ವರ್ತಕರಿಗೆ ಎಚ್ಚರಿಕೆ ನೀಡಿದೆ.
ಜಿಎಸ್ಟಿ ನೋಂದಣಿ ಮಾಡಿಕೊಳ್ಳದೇ ಜಿಎಸ್ಟಿ ವಿನಾಯಿತಿ ಮಿತಿ ಮೀರಿ ವ್ಯಾಪಾರ ಮಾಡಿರುವ 5,500ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಇಲಾಖೆಯಿಂದ ನೋಟಿಸ್ ನೀಡಿದ ಬೆನ್ನಲ್ಲೇ ಕೆಲ ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ.
ವರ್ತಕರು ತಾವು ಮಾಡಿದ ವ್ಯಾಪಾರಕ್ಕೆ ‘ಯುಪಿಐ’ ಮೂಲಕ ಹಣ ಸ್ವೀಕರಿಸುವುದು ಒಂದು ಮಾರ್ಗ ಮಾತ್ರ. ಯುಪಿಐ, ಕಾರ್ಡ್, ನಗದು ಸೇರಿದಂತೆ ಯಾವುದೇ ರೂಪದಲ್ಲಿ ಹಣ ಸ್ವೀಕರಿಸಿದರೂ ಜಿಎಸ್ಟಿ ಕಾಯ್ದೆ ಅನ್ವಯಿಸುತ್ತದೆ ಎಂದು ತಿಳಿಸಿದೆ.
ನೋಟಿಸ್ ಸ್ವೀಕರಿಸಿರುವ ವರ್ತಕರು ಯಾವ ಕಚೇರಿಯಿಂದ ನೋಟಿಸ್ ಬಂದಿದೆಯೋ ಆ ಕಚೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಿದರೆ ಅಧಿಕಾರಿಗಳು ಪರಿಶೀಲಿಸಿ ಅದಕ್ಕೆ ಪರಿಹಾರಗಳನ್ನು ತಿಳಿಸುತ್ತಾರೆ. ಒಂದು ಹಣಕಾಸು ವರ್ಷದಲ್ಲಿ ಸರಕುಗಳ ಪೂರೈಕೆ ಮಾಡುವ ವ್ಯಾಪಾರಿಗಳು 40 ಲಕ್ಷ ರು. ಹಾಗೂ ಸೇವೆಗಳ ಪೂರೈಕೆ ಮಾಡುವ ವ್ಯಾಪಾರಿಗಳು 20 ಲಕ್ಷ ರು. ಮೇಲ್ಪಟ್ಟು ವ್ಯಾಪಾರ ಮಾಡಿದರೆ ಜಿಎಸ್ಟಿ ನೋಂದಣಿ ಕಡ್ಡಾಯವಿದೆ.
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಬಂಧಿಸಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಅನುಮಾನಗಳು ಇದ್ದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1800 425 6300ಸಂಪರ್ಕಿಸಬಹುದು ಎಂದು ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆ ತಿಳಿಸಿದೆ.ಬೆಂಗಳೂರಿನ ಗಾಂಧಿ ನಗರ 1ನೇ ಮುಖ್ಯ ರಸ್ತೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿ ಸಂಪರ್ಕಿಸಬಹುದಾಗಿದೆ.
ಏನೇ ಅನುಮಾನ ಇದ್ದರೂ ವ್ಯಾಪಾರಿಗಳು ಮಂಗಳೂರು-1800-425-5581, ಬೆಳಗಾವಿ-1800-425-0320, ಮೈಸೂರು 0821-2420360, ಶಿವಮೊಗ್ಗ 08182-258660, ಕಲಬುರಗಿ- 1800-599-0051 ಹಾಗೂ ಧಾರವಾಡ-1800-425-8490 , ದಾವಣಗೆರೆ 1800-425-0377 ಸಂಪರ್ಕಿಸಬಹುದಾಗಿದೆ.