ಪಾಸ್‌ಪೋರ್ಟ್ ಪಡೆಯುವ ಹಾಗೂ ಅದರಲ್ಲಿ ಬದಲಾವಣೆಗಳನ್ನು ಮಾಡುವ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮವು ಪತಿ-ಪತ್ನಿಯಂದಿರಿಗೆ ಹೆಚ್ಚು ಅನುಕೂಲಕರವಾಗಿದ್ದು, ಇನ್ನು ಮುಂದೆ ಪಾಸ್‌ಪೋರ್ಟ್‌ನಲ್ಲಿ ತಮ್ಮ ಸಂಗಾತಿಯ ಹೆಸರನ್ನು ಸೇರಿಸಲು ಮದುವೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಹೌದು, ಈ ಹಿಂದೆ ಪಾಸ್‌ಪೋರ್ಟ್‌ನಲ್ಲಿ ಗಂಡ ಅಥವಾ ಹೆಂಡತಿಯ ಹೆಸರನ್ನು ಸೇರಿಸಬೇಕಾದರೆ, ಮದುವೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನೀಡಬೇಕಿತ್ತು. ಇದರಿಂದಾಗಿ ಅನೇಕ ದಂಪತಿಗಳಿಗೆ ತೊಂದರೆಯಾಗುತ್ತಿತ್ತು. ಅದರಲ್ಲೂ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಮದುವೆ ಪ್ರಮಾಣಪತ್ರಕ್ಕೆ ಅಷ್ಟೇನೂ ಮಹತ್ವ ನೀಡದ ಕಾರಣ, ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಜನರು ಪರದಾಡುವಂತಾಗಿತ್ತು.
ಆದರೆ ಇದೀಗ ವಿದೇಶಾಂಗ ಸಚಿವಾಲಯವು ಈ ನಿಯಮವನ್ನು ಸಡಿಲಗೊಳಿಸಿದ್ದು, ಮದುವೆ ಪ್ರಮಾಣಪತ್ರದ ಕಡ್ಡಾಯ ನಿಯಮವನ್ನು ತೆಗೆದುಹಾಕಿದೆ. ಇದರ ಬದಲು, ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಮಾನ್ಯ ಮಾಡಲಾಗಿದೆ. ಇನ್ನು ಮುಂದೆ ಪಾಸ್‌ಪೋರ್ಟ್‌ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಬಯಸುವವರು ಅನುಬಂಧ ಜೆ (Annexure J) ಅನ್ನು ಭರ್ತಿ ಮಾಡಬೇಕಾಗುತ್ತದೆ.
ಈ ಅನುಬಂಧದಲ್ಲಿ ಅರ್ಜಿದಾರರು ತಮ್ಮ ಮದುವೆಯ ಫೋಟೋ ಹಾಗೂ ಜಂಟಿ ಫೋಟೋವನ್ನು ಅಪ್‌ಲೋಡ್ ಮಾಡಬಹುದು. ಜೊತೆಗೆ ಇಬ್ಬರೂ ಜಂಟಿಯಾಗಿ ಸಹಿ ಮಾಡಬೇಕಾಗುತ್ತದೆ. ಈ ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಮದುವೆ ಪ್ರಮಾಣಪತ್ರಕ್ಕೆ ಸಮಾನವಾಗಿ ಪರಿಗಣಿಸಲಾಗುತ್ತದೆ. ಇದರ ಆಧಾರದ ಮೇಲೆ ಪತಿ ಮತ್ತು ಪತ್ನಿಯ ಹೆಸರನ್ನು ಪಾಸ್‌ಪೋರ್ಟ್‌ನಲ್ಲಿ ಸುಲಭವಾಗಿ ಸೇರಿಸಲಾಗುತ್ತದೆ. ಸರ್ಕಾರದ ಈ ಕ್ರಮವು ಅನೇಕ ದಂಪತಿಗಳಿಗೆ ನೆಮ್ಮದಿ ನೀಡಿದೆ ಎನ್ನಬಹುದು.