BIG NEWS: ಬೆಳಗಾವಿ ವಿಮಾನ ನಿಲ್ದಾಣಕ್ಕೆ ‘ವೀರ ರಾಣಿ ಚೆನ್ನಮ್ಮ’ ಹೆಸರಿಡುವಂತೆ ಕೇಂದ್ರಕ್ಕೆ ಪತ್ರ: ಸಿಎಂ ಸಿದ್ಧರಾಮಯ್ಯ

ಬೆಳಗಾವಿ: 1857ರ ಸಿಪಾಯಿ ದಂಗೆಗೂ 33 ವರ್ಷಗಳ ಮೊದಲೇ ಬ್ರಿಟೀಷರನ್ನು ಕಿತ್ತೂರು ಚೆನ್ನಮ್ಮ ಸೋಲಿಸಿದರು. ಬ್ರಿಟೀಷರನ್ನು ಸೋಲಿಸಿ ಕಿತ್ತೂರಿನ ಸ್ವಾಭಿಮಾನವನ್ನು ಗೆಲ್ಲಿಸಿದ ದಿನವೇ ಕಿತ್ತೂರು ಉತ್ಸವದ ದಿನವಾಗಿದೆ. 2017 ರಲ್ಲಿ ಕಿತ್ತೂರು ಉತ್ಸವವನ್ನು ಮೊದಲ ಬಾರಿಗೆ ಆರಂಭಿಸಿದ್ದು ನಮ್ಮ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಅವರು ಬೆಳಗಾವಿ ಜಿಲ್ಲಾಡಳಿತ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ 201ನೇ ವರ್ಷದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಸ್ಮರಿಸಿದರು.

ವ್ಯಾಪಾರ ಮಾಡಲು ಬಂದ ಬ್ರಿಟೀಷರು ಭಾರತೀಯರನ್ನು ಪರಸ್ಪರ ಎತ್ತಿಕಟ್ಟಿ ಇಡೀ ದೇಶವನ್ನು ವಶಕ್ಕೆ ಪಡೆದುಕೊಂಡರು. ಬ್ರಿಟೀಷರಿಗೆ ನಮ್ಮವರೇ ಬೆಂಬಲ ಕೊಡುತ್ತಿದ್ದರು. ಚೆನ್ನಮ್ಮ ಮತ್ತು ರಾಯಣ್ಣನವರ ವಿರುದ್ಧ ಪಿತೂರಿ ಮಾಡಿದ್ದರು. ಈಗಲೂ ಭಾರತೀಯರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಎತ್ತಿಕಟ್ಟಿ ಕಚ್ಚಾಡಿಸುವವರು ನಮ್ಮ ನಡುವೆಯೇ ಇದ್ದಾರೆ. ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಸ್ವಾಭಿಮಾನಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಬಾಳಪ್ಪ ಅವರು ಒಟ್ಟಾಗಿ ಶೌರ್ಯದಿಂದ ಬ್ರಿಟೀಷರನ್ನು ಹಿಮ್ಮೆಟ್ಟಿಸಿದರು. ಬಾಬಾ ಸಾಹೇಬ್ ಪಾಟೀಲರು ಶಾಸಕರಾದ ಬಳಿಕ ಕಿತ್ತೂರು ಉತ್ಸವ ಅತ್ಯಂತ ಸಂಭ್ರಮ ಮತ್ತು ಅರ್ಥಪೂರ್ಣವಾಗಿ ನಡೆಸುತ್ತಿದ್ದಾರೆ. ಇದಕ್ಕಾಗಿ ಶಾಸಕರು ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಟಿಪ್ಪು, ಹೈದರಾಲಿ ಇಬ್ಬರೂ ಬ್ರಿಟೀಷರ ನಿದ್ದೆಗೆಡಿಸಿದ್ದರು. ನಾಲ್ಕು ಮೈಸೂರು ಯುದ್ಧಗಳನ್ನು ನಡೆಸಿದ್ದರು. ಟಿಪ್ಪು, ಹೈದರಾಲಿ ಇಬ್ಬರೂ ಬ್ರಿಟೀಷರ ವಿರುದ್ಧ ವಿರೋಚಿತವಾಗಿ ಹೋರಾಡಿದ ಅಪ್ಪಟ ವೀರರು, ದೇಶಪ್ರೇಮಿಗಳು. ಈ ಇತಿಹಾಸವನ್ನು ಹೇಳಿದ ಕೂಡಲೇ ಸಿದ್ದರಾಮಯ್ಯ ಓಲೈಕೆ ರಾಜಕಾರಣ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. “ಇತಿಹಾಸ ಅರಿಯದವರು ಭವಿಷ್ಯ ರೂಪಿಸಲಾರರು” ಎನ್ನುವ ಅಂಬೇಡ್ಕರ್ ಅವರ ಮಾತು ಮರೆಯಬಾರದು ಎಂದರು.

ರಾಣಿ ಚೆನ್ನಮ್ಮನವರ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಕೂಡ ನಮ್ಮ ಸರ್ಕಾರವೇ. ಹಲವು ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಣೆಗೆ ತಂದಿದ್ದು ಕೂಡ ನಾವೆ. ಇದು ನಮ್ಮ‌ ಸಂಸ್ಕೃತಿ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಚೆನ್ನಮ್ಮ ಅವರ ಹೆಸರಿಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read