ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 263 ಎಂಎಲ್‌ಡಿ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿರುವ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನೆಲಮಂಗಲದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.
ನೆಲಮಂಗಲ ತಾಲೂಕು ಕಣ್ಣೇಗೌಡನಹಳ್ಳಿ ಗ್ರಾಮದ ಕೆರೆಯಲ್ಲಿ ಭೂಮಿ ಪೂಜೆ ನೆರವೇರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ನಂತರ ಬಸವನಹಳ್ಳಿ ಸಮೀಪ 70 ಕೆರೆಗಳಿಗೆ ನೀರು ತುಂಬಿಸುವ ವೃಷಭಾವತಿ ವ್ಯಾಲಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ವೃಷಭಾವತಿ ನೀರನ್ನು ಬಹಳ ಹಿಂದೆಯೇ ಸಂಸ್ಕರಣೆ ಮಾಡಿ ಹರಿಸಲು ನಿರ್ಧರಿಸಿದ್ದೆವು. ವೃಷಭಾವತಿ ಯೋಜನೆ 1081 ಕೋಟಿ ರೂಪಾಯಿ ವೆಚ್ಚದ 259 ಕೆರೆಗಳಿಗೆ ನೀರು ಒದಗಿಸುವ ಯೋಜನೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿಸಿ, ಕೈಗಾರಿಕೆ, ಕೃಷಿಗೆ ವೃಷಭಾವತಿ ಸಂಸ್ಕರಿಸಿದ ನೀರು ದೊಡ್ಡ ಕೊಡುಗೆ ನೀಡುತ್ತದೆ. ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆಗೆ ಎರಡನೇ ಹಾಗೂ ಮೂರನೇ ಹಂತದಲ್ಲಿ ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದ್ದಾರೆ.