ಬೆಂಗಳೂರು: ರಾಜ್ಯದ ಅರೇಬಿಕ್ ಮದರಸಾ ಬೋಧಕರಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಮೊದಲ ಹಂತದಲ್ಲಿ 200 ಮದರಸಾಗಳ ಬೋಧಕರಿಗೆ ಕನ್ನಡ ಕಲಿಸಲಿದ್ದು, ಮುಂದಿನ ದಿನಗಳಲ್ಲಿ ಮಸೀದಿಗಳ ಮೌಲ್ವಿಗಳಿಗೂ ಕನ್ನಡ ಕಲಿಸಲಾಗುವುದು ಎಂದು ವಸತಿ, ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯದ ಆರಂಭಿಸಿದ ಮದರಸಾಗಳ 200 ಬೋಧಕರಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾಹಿತಿ ನೀಡಿದರು.
ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರದಿಂದ ಮದರಸಾ ಶಿಕ್ಷಕರಿಗೆ ಕನ್ನಡ ಕಲಿಸಲು ಪಠ್ಯ ಸಿದ್ಧಪಡಿಸಲಾಗಿದೆ. 36 ಗಂಟೆಗಳ ಕಾಲಾವಧಿಯ ಕನ್ನಡ ಕಲಿಕಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೋಧಕರಿಗೆ ವಾರಾಂತ್ಯದಲ್ಲಿ ದಿನಕ್ಕೆ ಎರಡು ಗಂಟೆ ಕನ್ನಡ ಕಲಿಸಲಾಗುವುದು. ಮುಂದೆ ಎಲ್ಲಾ 2000 ಮದರಸಾಗಳಿಗೆ ಇದನ್ನು ವಿಸ್ತರಿಸಲಾಗುವುದು. ಮಸೀದಿಗಳ ಮೌಲ್ವಿಗಳಿಗೂ ಕನ್ನಡ ಕಲಿಸಲಾಗುವುದು ಎಂದು ಹೇಳಲಾಗಿದೆ.