ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಈ ಮಳೆ ಬರುವ ವೇಳೆ ಈ ಮುನ್ನೆಚ್ಚರಿಕಾ ಕ್ರಮಗಳ ಪಾಲನೆ ಕಡ್ಡಾಯ ಎಂದು ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ ಹೊರಡಿಸಿದೆ.
2025-26ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ದಿನಾಂಕ 15.05.2024 ರ ಉಲ್ಲೇಖಿತ 1 ರ ಪತ್ರದಲ್ಲಿ, ಮಳೆಗಾಲದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪ್ರತಿ ಶಾಲೆಗಳಲ್ಲಿ ಪಾಲಿಸಬೇಕಾದ 7 ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿರುತ್ತದೆ.
ಪ್ರಸ್ತುತ ರಾಜ್ಯದ ಬಹುತೇಕ ಕಡೆಗಳಲ್ಲಿ ತೀವ್ರವಾಗಿ ಮಳೆಯುಂಟಾಗುತ್ತಿದ್ದು ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಉಲ್ಲೇಖ(1)ರ ಪತ್ರದಲ್ಲಿ ತಿಳಿಸಲಾಗಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಪಾಲಿಸಲು ಸೂಚಿಸಿದೆ. ಮುಂದುವರೆದು, ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ಶಾಲೆಗಳ ಕಟ್ಟಡಗಳಲ್ಲಿನ ಸಮಸ್ಯೆಗಳ ಬಗ್ಗೆ ಇತ್ತೀಚಿಗೆ ಪತ್ರಿಕೆಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿದ್ದು, ಈ ವಿಷಯವಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಈಗಾಗಲೇ ಸಾಕಷ್ಟು ನಿರ್ದೇಶನಗಳನ್ನು ಸರ್ಕಾರದಿಂದ ನೀಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಶಾಲೆಗಳ ಕಟ್ಟಡಗಳ ಸುರಕ್ಷತೆಯ ಬಗ್ಗೆ, ಪರಿಶೀಲಿಸಿ ತುರ್ತು ದುರಸ್ತಿಗಾಗಿ ಶಿಕ್ಷಣ ಇಲಾಖೆಗೆ ನೀಡಿರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅನುದಾನಗಳಿಂದ ರಾಜ್ಯ ವಿಪತ್ತು ನಿರ್ವಹಣಾ ನಿಧಿ ಹಾಗೂ ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳ ಅನುದಾನಗಳಿಂದ ಶೀಘ್ರ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಕುರಿತು ಉಲ್ಲೇಖ(2)ರ ಸರ್ಕಾರದ ಪತ್ರದಲ್ಲಿ ಈ ಕೆಳಕಂಡ ಅಂಶಗಳಂತೆ ಕ್ರಮವಹಿಸಲು ಸೂಚಿಸಲಾಗಿದ್ದು, ಈ ಕುರಿತು ತಮ್ಮ ಹಂತದಲ್ಲಿ ವೈಯಕ್ತಿಕ ಗಮನಹರಿಸಿ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.
- ಶಾಲಾ ಕಟ್ಟಡ ಮತ್ತು ಕೊಠಡಿಗಳ ಸದೃಡತೆಯ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಬಂಧಿಸಿದ ಅಭಿಯಂತರರ ಮೂಲಕ ಪರಿಶೀಲನೆ ನಡೆಸಿ ಸುರಕ್ಷತಾ ಪ್ರಮಾಣ ಪತ್ರ ಪಡೆಯಲು ಕ್ರಮವಹಿಸುವುದು.
- ತಪಾಸಣೆ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ಬಳಕೆಗೆ ಯೋಗ್ಯವಲ್ಲವೆಂದು ಕಂಡು ಬಂದಲ್ಲಿ ಕೂಡಲೇ ಅಂತಹ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದೇ ಸೂಕ್ತ ಬದಲಿ ವ್ಯವಸ್ಥೆಯನ್ನು ಮಾಡಲು ಕ್ರಮವಹಿಸುವುದು.
- ಅಲ್ಲದೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಾಲೆಗಳ ಕೊಠಡಿಗಳ ವಸ್ತುಸ್ಥಿತಿಯ ಬಗ್ಗೆ ಉಪ ನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ ಮತ್ತು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೈಜ ವರದಿಯನ್ನು ಪಡೆದು ಅದರಂತೆ ತುರ್ತು ಅಗತ್ಯವಿರುವ ದುರಸ್ಸಿ ಕಾರ್ಯಗಳನ್ನು ಆಧ್ಯತೆಯ ಮೇಲೆ ನಿರ್ವಹಿಸುವುದು.
- ಈಗಾಗಲೇ ಕಟ್ಟಡ ಕಾಮಗಾರಿಗಳು ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಅಂತಹ ಕಡೆ ಶಾಲೆಯ ವಿದ್ಯಾರ್ಥಿಗಳು ಕಟ್ಟಡ ನಿರ್ಮಾಣ/ದುರಸ್ತಿ ಕೆಲಸ ನಡೆಯುತ್ತಿರುವ ಕಡೆ ಹೋಗದಿರುವ ರೀತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
. ಶಿಥಿಲಗೊಂಡಿರುವ ಕೊಠಡಿಗಳು ಅಥವಾ ಕಟ್ಟಡಗಳು ಇದ್ದಲ್ಲಿ ಅಂತಹ ಕಡೆ ವಿದ್ಯಾರ್ಥಿಗಳು ಹೋಗದೇ ಇರುವ ರೀತಿಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳತಕ್ಕದ್ದು. - ಪ್ರತಿವಾರ ಸಂಬಂಧಿಸಿದ ಅಧಿಕಾರಿಗಳು ಸಭೆ ನಡೆಸಿ ವಸ್ತು ಸ್ಥಿತಿ ಮಾಹಿತಿಯನ್ನು ಪರಿಶೀಲಿಸಿ ಕೈಗೊಳ್ಳಬೇಕಾಗಿರುವ ತುರ್ತು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಅದರಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು.
ಈ ಮೇಲಿನ ಎಲ್ಲಾ ಅಂಶಗಳ ಬಗ್ಗೆ, ಎಲ್ಲಾ ಉಪನಿರ್ದೇಶಕರು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಪತ್ರದೊಂದಿಗೆ ಲಗತ್ತಿಸಿರುವ ದೃಡೀಕರಣ ಪತ್ರದ ನಮೂನೆಯಲ್ಲಿ ನೀಡುವಂತೆ ಸೂಚಿಸಿದೆ. ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಯಾವುದೇ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳು ನೇರ ಹೊಣೆಗಾರರಾಗಿರುತ್ತಾರೆ ఎంబ ಅಂಶವನ್ನು ಸ್ಪಷ್ಟಪಡಿಸುತ್ತಾ ನಿಯಮಾನುಸಾರ ಕ್ರಮವಹಿಸಲು ಸೂಚಿಸಿದೆ.
ಜಿಲ್ಲಾ ನೋಡಲ್ ಅಧಿಕಾರಿಗಳು, ತಮ್ಮ ಜಿಲ್ಲೆಗೆ ಭೇಟಿನೀಡಿ, ಶಾಲೆಗಳಲ್ಲಿ ಬೋಧನೆಗಾಗಿ ಸುರಕ್ಷಿತ ಕಟ್ಟಡವನ್ನು ಬಳಸುತ್ತಿರುವುದಾಗಿ ಹಾಗೂ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ತಮ್ಮ ವರದಿಯನ್ನು ದಿನಾಂಕ 14.07.2025ರೊಳಗೆ ಈ ಪತ್ರಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಸಲ್ಲಿಸಲು ಸೂಚಿಸಿದೆ.

