ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಯಲ್ಲಿ ಪ್ರತಿದಿನ ಮುಖ್ಯ ಶಿಕ್ಷಕರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಶಾಲೆಯಲ್ಲಿ ಪ್ರತಿದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ಸುತ್ತೋಲೆಯಲ್ಲಿ..?
ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷತಾ ನೀತಿ-2016 ಮತ್ತು ಈ ಕಛೇರಿಯಿಂದ ಹೊರಡಿಸಲಾಗಿದೆ. ಸುತ್ತೋಲೆಗಳಲ್ಲಿ ಮಕ್ಕಳ ಸುರಕ್ಷತೆ ಸಂಬಂಧ ಶಾಲಾ ಹಂತದಲ್ಲಿ ವಹಿಸ ಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ಸೂಚಿಸಲಾಗಿದೆ. ಆದಾಗ್ಯೂ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯಲ್ಲಿ ಹಲವು ರೀತಿಯ ಲೋಪ/ಅಪಸವ್ಯಗಳು ಸಂಭವಿಸುತ್ತಿದ್ದು ಇವುಗಳನ್ನು ಅಧಿಕಾರಿಗಳ ಶಾಲಾ ಭೇಟಿ ಸಮಯದಲ್ಲಿ, ಮಾಧ್ಯಮಗಳಲ್ಲಿ ವರದಿ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಶಾಲಾ ಮುಖ್ಯ ಶಿಕ್ಷಕರು ಪ್ರತಿನಿತ್ಯ ಕೆಲವು ಪ್ರಾಥಮಿಕ ಅಂಶಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿದಲ್ಲಿ ಶಾಲೆಗಳಲ್ಲಿನ ಸಂಭಾವ್ಯ ದುರ್ಘಟನೆಗಳನ್ನು ತಪ್ಪಿಸ ಬಹುದಾಗಿದೆ.
ಈ ಹಿನ್ನೆಲೆಯಲ್ಲಿ, ಶಾಲೆಯಲ್ಲಿ ಪ್ರತಿದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳ ಪಟ್ಟಿಯನ್ನು ಅನುಬಂಧಿಸಿ ಸಲ್ಲಿಸುತ್ತಾ ಪ್ರತೀ ಶಾಲಾ ವ್ಯಾಪ್ತಿಯಲ್ಲಿ ಪಟ್ಟಿಯಲ್ಲಿನ ಅಂಶಗಳನ್ನು ಪ್ರತಿನಿತ್ಯ ಪರಿಶೀಲಿಸಿ, ನಿತ್ಯದ ಮಾಹಿತಿಯನ್ನು ಆಯಾ ದಿನಾಂಕಗಳಂದು ಎಲ್ಲಾ ವ್ಯವಸ್ಥೆಗಳು ಸರಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಮಾರ್ಕ್ ಅನ್ನು ನಮೂದಿಸುವುದು ಮತ್ತು ಇವುಗಳಲ್ಲಿ ವ್ಯತ್ಯಯಗಳೇನಾದರು ಕಂಡು ಬಂದಲ್ಲಿ ಕೂಡಲೇ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸುವುದು. ಒಟ್ಟಾರೆಯಾಗಿ ಶಾಲಾ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ತಪ್ಪಿದಲ್ಲಿ ಲೋಪಗಳಿಗೆ ಆಯಾ ಶಾಲೆಯ ಮುಖ್ಯ ಶಿಕ್ಷಕರನ್ನೇ ನೇರ ಹೊಣೆಗಾರರನನ್ನಾಗಿಸಲಾಗುವುದೆಂದು ಎಚ್ಚರಿಸಿದೆ.
ಈ ಸುತ್ತೋಲೆಯನ್ನು ಮುಖ್ಯ ಶಿಕ್ಷಕರು ಶಾಲೆಗಳಲ್ಲಿ ಪ್ರತಿದಿನ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂದು ಸಂಬಂಧಪಟ್ಟ ಜಿಲ್ಲಾ ನೋಡಲ್ ಅಧಿಕಾರಿಗಳು, ಉಪನಿರ್ದೇಶಕರು (ಆಡಳಿತ/ ಅಭಿವೃದ್ಧಿ) ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇ ಸಿ ಒ, ಬಿ ಆರ್ ಸಿ, ಬಿ ಆರ್ ಪಿ, ಸಿ ಆರ್ ಪಿ ಗಳು ಖಚಿತ ಪಡಿಸಿಕೊಳ್ಳಲು ಸೂಚಿಸಿದೆ. ಸದರಿ ಅಂಶಗಳನ್ನು ಶಾಲೆಗಳಲ್ಲಿ ಪಾಲಿಸುತ್ತಿರುವ ಬಗ್ಗೆ ಜಿಲ್ಲಾವಾರು ಕ್ರೋಢೀಕೃತ ವರದಿಯನ್ನು ಕಡ್ಡಾಯವಾಗಿ ಕೇಂದ್ರ ಕಛೇರಿಗೆ ಸಲ್ಲಿಸಲು ಸೂಚಿಸಿದೆ. ಅಲ್ಲದೆ ಸದರಿ ಮಾಹಿತಿಯನ್ನು SATS ತಂತ್ರಾಂಶದಲ್ಲಿ ಸಹ ಪ್ರತೀ ದಿನ ಇಂದೀಕರಿಸಲು ತಿಳಿಸಿದೆ.ಮುಂದುವರೆದು ಶಾಲೆಗೆ ಭೇಟಿ ನೀಡುವ ಅಧಿಕಾರಿಗಳು ಕಡ್ಡಾಯವಾಗಿ ಅನುಬಂಧಿಸಿದ ಪಟ್ಟಿಯಲ್ಲಿನ ಎಲ್ಲಾ ಅಂಶಗಳನ್ನು ದಿನವಹಿ ನಿರ್ವಹಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ದೃಢೀಕರಿಸಲು ಸೂಚಿಸಿದೆ.

