ಮೈಸೂರು: ಕೇಂದ್ರ ಸರ್ಕಾರ ಜಿ.ಎಸ್.ಟಿ ಎರಡು ಸ್ಲ್ಯಾಬ್ ಮಾಡುವುದರಿಂದ ಪ್ರತಿ ವರ್ಷ 15 ಸಾವಿರ ಕೋಟಿ ನಷ್ಟವಾಗಬಹುದೆಂದು ಅಂದಾಜಿಸಲಾಗಿದೆ. ತರ್ಕಬದ್ಧಗೊಳಿಸುವುದನ್ನು ಸ್ವಾಗತಿಸುತ್ತೇವೆ, ಆದರೆ ಹಣಕಾಸಿನ(Revenue Protection) ರಕ್ಷಣೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಎಂಟು ರಾಜ್ಯಗಳು ದೆಹಲಿಯಲ್ಲಿ ಚರ್ಚೆ ಮಾಡಿದ್ದು, 2.50 ಲಕ್ಷ ಕೋಟಿ ರೂ. ಇಡೀ ರಾಜ್ಯದಲ್ಲಿ ಸಂಗ್ರಹವಾಗುತ್ತದೆ. 15 ಸಾವಿರ ಕೋಟಿ ನಷ್ಟವಾಗಲಿದ್ದು, ಇದು ದೊಡ್ಡ ಮೊತ್ತ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಿಎಂ, 2017 ರಲ್ಲಿ ಜಿಎಸ್‌ಟಿ ಜಾರಿಯಾದಾಗ 5 ವರ್ಷ ಮಾತ್ರ ಪರಿಹಾರ ನೀಡುವುದಾಗಿ ಹೇಳಿದ್ದರು. ಈಗ ಸುಮಾರು 12% ತೆರಿಗೆ ಬೆಳವಣಿಗೆಯಾಗಿದೆ. ಲಕ್ಷುರಿ(ಸಿನ್ ಗೂಡ್ಸ್) ವಸ್ತುಗಳಾದ ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಬೆಂಜ್ ಕಾರುಗಳಲ್ಲಿ ಓಡಾಡುವವ ಮೇಲೆ ಸೆಸ್ ಹಾಕಿ ನಮಗೆ ಪರಿಹಾರ ಕೊಡಿ ಎಂದು ಸಲಹೆ ನೀಡಿದ್ದೇವೆ. ಸಚಿವ ಕೃಷ್ಣಭೈರೇಗೌಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರೇ ಈಗ ಎಂಟು ರಾಜ್ಯಗಳ ಆರ್ಥಿಕ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 3 ಮತ್ತು 4 ರಂದು ನಡೆಯಲಿರುವ ಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಎಸ್‌ಟಿ ವಿಚಾರವಾಗಿ ರಾಜ್ಯದ ಬಿಜೆಪಿಯ ಸಂಸದರು ಎಂದಿಗೂ ಕೇಂದ್ರವನ್ನು ಒತ್ತಾಯಿಸುವುದಿಲ್ಲ. ಕರ್ನಾಟಕಕ್ಕೆ ₹11,950 ಕೋಟಿಗಳು ನಷ್ಟವಾಯಿತು. ಬಿಜೆಪಿ ಸಂಸದರು ಈ ಬಗ್ಗೆ ಮಾತನಾಡಿಯೇ ಇಲ್ಲ. ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಂಡಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಯಾವಾಗ ಮಾತನಾಡಿದ್ದಾರೆ? ಧರ್ಮಸ್ಥಳದ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.