ಬೆಂಗಳೂರು: ವ್ಹೀಲಿಂಗ್ ನಂತಹ ಅಪಾಯಕಾರಿ ಚಟುವಟಿಕೆ ತಡೆಗಟ್ಟಲು ಭಾರತೀಯ ನಾಗರಿಕ ಸಂಹಿತೆ(ಬಿಎನ್ಎಸ್) ಮತ್ತು ಭಾರತೀಯ ಮೋಟಾರ್ ವಾಹನ ಕಾಯ್ದೆಗೆ ಕಠಿಣ ನಿಯಮ ಸೇರ್ಪಡೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವ್ಹೀಲಿಂಗ್ ಮಾಡಿ ಅದನ್ನು ಪ್ರಶ್ನಿಸಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತ ಕೊಪ್ಪಳ ಜಿಲ್ಲೆ ಗಂಗಾವತಿಯ ಅರ್ಬಾಜ್ ಖಾನ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠ ಈ ನಿರ್ದೇಶನ ನೀಡಿದೆ.
ಅಪಾಯಕಾರಿ ವ್ಹೀಲಿಂಗ್ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಸುವ್ಯವಸ್ಥೆ, ಜನರ ರಕ್ಷಣೆ ಮತ್ತು ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊದಲಿಗೆ ವ್ಹೀಲಿಂಗ್ ವಿಶಾಲವಾದ ನಗರ ಪ್ರದೇಶಗಳ ಹೆದ್ದಾರಿಗೆ ಸೀಮಿತವಾಗಿತ್ತು. ಈಗ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ. ನಿರ್ಲಕ್ಷ್ಯ, ಅತಿ ವೇಗ, ವಿವೇಚನಾರಹಿತ ಚಾಲನೆ ನಿಯಂತ್ರಿಸಲು ಹಾಲಿ ಕಾನೂನುಗಳು ಸಾಕಾಗುವುದಿಲ್ಲ. ಹೀಗಾಗಿ ಶಾಸಕಾಂಗವು ಕಠಿಣ ನಿಯಮಗಳನ್ನು ಕಾಯ್ದೆಗೆ ಸೇರಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ತಿಳಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ಆರೋಪಗಳು ಜಾಮೀನು ಸಹಿತವಾಗಿವೆ ಹಾಗೂ ತನಿಖೆ ಪೂರ್ಣಗೊಂಡು ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕು ಎಂದೇನಿಲ್ಲ. ಆರೋಪಿ ಪದೇಪದೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಆತನಿಗೆ ಜಾಮೀನು ನೀಡಲಾಗದು ಎಂದು ನ್ಯಾಯಪೀಠ ಹೇಳಿದೆ.