ಬೆಂಗಳೂರು : ರಾಜ್ಯಾದ್ಯಂತ 6-10 ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಸಿಂಚನ ಕಾರ್ಯಕ್ರಮ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 111(v)ರ ಘೋಷಣೆಯಂತೆ ಅತೀ ಕಡಿಮೆ ಕಲಿಕಾ ಸ್ತರದಲ್ಲಿರುವ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ‘ಮರು ಸಿಂಚನ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಕುರಿತು ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ 2024-25ನೇ ಸಾಲಿನ ಆಯವ್ಯಯ ಘೋಷಿತ ಕಂಡಿಕೆ 96(c) ರಂತೆ ಕಲಿಕೆಯಲ್ಲಿ ಹಿಂದುಳಿದ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಸುಧಾರಿಸಲು 10 ಕೋಟಿ ರೂ. ಅನುದಾನದಲ್ಲಿ ರಾಜ್ಯದ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ 6 & 7 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಉತ್ತಮಪಡಿಸಲು “ಮರು ಸಿಂಚನ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (2)ರಲ್ಲಿ 2025-26ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಭಾಷಣದ ಕಂಡಿಕೆ 111 (v)ರಲ್ಲಿ ಈ ಕೆಳಕಂಡಂತೆ ಘೋಷಣೆ ಮಾಡಲಾಗಿದೆ.“ಸರ್ಕಾರಿ ಶಾಲೆಗಳಲ್ಲಿ ಅತೀ ಕಡಿಮೆ ಕಲಿಕಾ ಸ್ತರದಲ್ಲಿರುವ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ‘ಮರು ಸಿಂಚನ’ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವುದು.”
ಮೇಲೆ ಓದಲಾದ ಕ್ರಮಾಂಕ (3)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಈ ಮುಂದಿನಂತೆ ಪ್ರಸ್ತಾಪಿಸಿರುತ್ತಾರೆ.ಮರುಸಿಂಚನ ಕಾರ್ಯಕ್ರಮವು 2023-2024 ಮತ್ತು 2024-2025 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರದ ಉಪಕ್ರಮವಾಗಿದೆ. ಟ್ರಾನ್ಸ್ಫಾರ್ಮ್ ಸ್ಕೂಲ್ಸ್ ಪೀಪಲ್ ಫಾರ್ ಆಕ್ಷನ್ ಸಂಸ್ಥೆಗಳ ತಾಂತ್ರಿಕ ಬೆಂಬಲವನ್ನು ಒದಗಿಸುವ ಪಾಲುದಾರಾಗಿರುತ್ತಾರೆ. ಇದು ಐದು ಶೈಕ್ಷಣಿಕ ವರ್ಷಗಳಲ್ಲಿ ಪ್ರತಿ ತರಗತಿಗೆ 50 ಗಂಟೆಗಳ ಕಲಿಕೆಯ ಕಾರ್ಯಕ್ರಮವಾಗಿದೆ. ಬುನಾದಿ ಮತ್ತು ಪೂರ್ವ-ಅವಶ್ಯಕ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇದು ಕಲಿಕೆಯ ಅಂತರವನ್ನು ನಿವಾರಿಸುತ್ತದೆ ಮತ್ತು 6-10 ತರಗತಿಯ ವಿದ್ಯಾರ್ಥಿಗಳಿಗೆ ವರ್ಗ-ಸೂಕ್ತವಾದ ಕಲಿಕೆಯ ಮಟ್ಟವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.







