ಬೆಂಗಳೂರು: ನಿಗದಿಯಂತೆ ಸೆ. 22 ರಿಂದ ಅ. 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿ ನಡೆಯಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸಮೀಕ್ಷೆಯಲ್ಲಿ ರಾಜ್ಯದ ಜಾತಿ ಪಟ್ಟಿಯಲ್ಲಿ ಇಲ್ಲದ ಮತ್ತು ಕ್ರೈಸ್ತ ಧರ್ಮದಲ್ಲಿ ಇಲ್ಲದ ಜಾತಿಗಳನ್ನು ಸೇರ್ಪಡೆ ಮಾಡಿರುವುದಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಆಕ್ಷೇಪಿಸಿದ್ದಾರೆ.
ಸೆ. 16ರಂದು ಬಿಜೆಪಿ ಸಂಸದರು ಮತ್ತು ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಈ ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಕುಂಬಾರ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಹೀಗೆ ಹೊಸ ಜಾತಿಗಳನ್ನು ಉಲ್ಲೇಖಿಸಿ ಕ್ರೈಸ್ತ ಧರ್ಮದಲ್ಲಿ ಜಾತಿ ಮಾನ್ಯತೆ ನೀಡುವ ಈ ಕ್ರಮವೂ ಸಾಮಾಜಿಕ ಅಶಾಂತಿಯ ಜೊತೆಗೆ ದೀರ್ಘಾವಧಿಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ತರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ರಾಜ್ಯದ ಜಾತಿ ಪಟ್ಟಿ ಇಲ್ಲದ ಮತ್ತು ಕ್ರೈಸ್ತ ಧರ್ಮದಲ್ಲಿ ಇಲ್ಲದ ಜಾತಿಗಳನ್ನು ಸೇರ್ಪಡೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.