ಬೆಂಗಳೂರು : 10 ವರ್ಷ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿ ಖಾಯಂಗೆ ಅರ್ಹ ಎಂದು ಹೈಕೋರ್ಟ್ ಮಹತ್ವದ ತೀರ್ಪುನೀಡಿದೆ.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಅವರನ್ನೊಳಗೊಂಡ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠವು ಮಂಜೂರಾದ ಹುದ್ದೆಯಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರನು ಖಾಯಂಗೊಳಿಸಲು ಅರ್ಹನಾಗಿದ್ದಾನೆ ಮತ್ತು ಕಾರ್ಯವಿಧಾನದ ಅಕ್ರಮಗಳು ಅಥವಾ ವಿಳಂಬವು ನಿರಾಕರಣೆಗೆ ಏಕೈಕ ಕಾರಣವಾಗಬಾರದು ಎಂದು ಅಭಿಪ್ರಾಯಪಟ್ಟಿದೆ.
ದಿನಗೂಲಿ ಆಧಾರದಲ್ಲಿ ಸತತ 30 ವರ್ಷ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿದ ದಿನಗೂಲಿ ನೌಕರನ ಸೇವೆ ಕಾಯಂಗೊಳಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ. ಮಂಜೂರಾತಿ ಹುದ್ದೆಯಲ್ಲಿ 10 ವರ್ಷ ನಿರಂತರವಾಗಿ ಕೆಲಸ ಮಾಡಿದ ಉದ್ಯೋಗಿ ಸೇವೆ ಕಾಯಂಗೆ ಅರ್ಹನಾಗುತ್ತಾನೆ ಎಂದು ಸ್ಪಷ್ಟಪಡಿಸಿದೆ.
ತಮ್ಮ ಸೇವೆ ಕಾಯಂಗೊಳಿಸಲು ನಿರಾಕರಿಸಿ ಆರಣ್ಯ ಇಲಾಖೆ ನೀಡಿದ್ದ ಹಿಂಬರಹ ಪುರಸ್ಕರಿಸಿದ ಆಡಳಿತಾತ್ಮಕ ನ್ಯಾಯಾಧೀಕರಣದ(ಕೆಎಟಿ) ಆದೇಶರದ್ದುಪಡಿಸುವಂತೆ ಕೋರಿ ಆನೇಕಲ್ ವಲಯದಲ್ಲಿ ಅರಣ್ಯ ವೀಕ್ಷಕ (ಫಾರೆಸ್ಟ್ ವಾಚರ್) ಪಿ.ಜುಂಜಪ್ಪ (53) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ.
ಜುಂಜಪ್ಪ ದಿನಗೂಲಿ ಆಧಾರದ ಮೇಲೆ 30 ವರ್ಷ ನಿರಂತರವಾಗಿ ಆರಣ್ಯ ವೀಕ್ಷಕ ಹಾಗೂ ಚಾಲಕನಾಗಿ ಕೆಲಸ ಮಾಡಿದ್ದರು. ಆದರೆ ಅವರ ಸೇವೆ ಕಾಯಂಗೊಳಿಸಲು ನಿರಾಕರಿಸಿ 2016ರ ಆ.29ರಂದು ಅರಣ್ಯ ಇಲಾಖೆ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿ 2019ರ ಜು.31ರಂದು ಆದೇಶಿಸಿತ್ತು. ಇದರಿಂದ ಜುಂಜಪ್ಪ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.