ಬೆಂಗಳೂರು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2,600 ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಕಾಗದ ರಹಿತ ಆಡಳಿತ ಮತ್ತು ಇ-ಆಫೀಸ್ ಆನ್‌ಲೈನ್ ಮೂಲಕವೇ ಎಲ್ಲ ಕಡತ ವ್ಯವಹಾರಕ್ಕಾಗಿ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳು ಕಾಗದ ರಹಿತವಾಗಿ ಕಾರ್ಯನಿರ್ವಹಿಸುವ ಮತ್ತು ಆನ್ಲೈನ್ ಮೂಲಕವೇ ಎಲ್ಲಾ ಕಡತಗಳನ್ನು ಇ- ಆಫೀಸ್ ಗೆ ಕಳುಹಿಸುವ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗುವುದು. 4000 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ಗಳನ್ನು ವಿತರಿಸಲಾಗಿದೆ. ಅವುಗಳಿಗೆ ಅಗತ್ಯವಿರುವ ಆ್ಯಪ್ ಗಳನ್ನು ಕೂಡ ಅಳವಡಿಸಲಾಗಿದೆ. ಇದರಿಂದ ಟಪಾಲು ವ್ಯವಸ್ಥೆ ಕೊನೆಗೊಳ್ಳಲಿದ್ದು, ಗ್ರಾಮ ಆಡಳಿತಾಧಿಕಾರಿಗಳ ಕೆಲಸದ ಹೊರೆ ಕಡಿಮೆಯಾಗುತ್ತದೆ. ಪ್ರಾಯೋಗಿಕವಾಗಿ ಆನ್ಲೈನ್ ಮೂಲಕ ಕಾರ್ಯನಿರ್ವಹಿಸುವ ಮತ್ತು ಡಿಜಿಟಲ್ ರೂಪದಲ್ಲಿ ಕಡತಗಳನ್ನು ಕಳುಹಿಸುವ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.