ಬೆಂಗಳೂರು: ಶಾಲೆಗಳ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಆರ್.ಎಸ್.ಎಸ್. ಕಾರ್ಯ ಚಟುವಟಿಕೆ ನಿರ್ಬಂಧಿಸುವ ಕುರಿತಂತೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ಕುರಿತಂತೆ ಬೆದರಿಕೆ ಕರೆ ಬರುತ್ತಿರುವ ವಿಚಾರವನ್ನು ಸಂಪುಟ ಗಂಭೀರವಾಗಿ ಪರಿಗಣಿಸುವ ಸಂಭವ ಇದೆ. ಆರ್.ಎಸ್.ಎಸ್. ವಿರುದ್ಧ ಹೇಳಿಕೆಗಾಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಬೆದರಿಕೆ ಕರೆ ಮಾಡುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಚಿಂತನೆ ನಡೆದಿದ್ದು, ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆರ್.ಎಸ್.ಎಸ್. ಮಾತ್ರವಲ್ಲ, ಬೇರೆ ಯಾವುದೇ ಸಂಘಟನೆಯೂ ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಜಾಗದಲ್ಲಿ ಚಟುವಟಿಕೆ ನಡೆಸಬಾರದು. ತಮಿಳುನಾಡಿನಲ್ಲಿ ಇದನ್ನು ನಿಷೇಧ ಮಾಡಿದ್ದರೆ ಅಲ್ಲಿಯ ವಿಧಾನ ನೋಡಿಕೊಂಡು ವರದಿ ಪಡೆದು ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.