ಬೆಂಗಳೂರು: ಅನುಕಂಪದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಹೊಸ ಮಾರ್ಗಸೂಚಿಗಳನ್ನು ರಚಿಸಿದ ಹೈಕೋರ್ಟ್ ಅವುಗಳನ್ನು ಪಾಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಜವಾನ ಆಗಿದ್ದ ರಾಜಾ ಪಟೇಲ್ ನಿಧನದ ನಂತರ ಆತನ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸರ್ಕಾರ ವಿಳಂಬ ಮಾಡಿದ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಎಂಟು ವಾರದಲ್ಲಿ ಮೃತ ನೌಕರನ ಪುತ್ರ ಮಹಿಬೂಬ್ ಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಸೂಚಿಸಿದೆ.
ಎಲ್ಲಾ ಅನುಕಂಪದ ನೇಮಕಾತಿ ಅರ್ಜಿಗಳನ್ನು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು. ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿಪಡಿಸಬೇಕು. ಅರ್ಜಿ ಸಲ್ಲಿಕೆಗೆ ಮಾರ್ಗದರ್ಶನ ನೀಡಬೇಕು. ಅರ್ಜಿ ಸಲ್ಲಿಕೆಯಾದ 90 ದಿನಗಳ ಒಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅರ್ಜಿಗಳನ್ನು ತಿರಸ್ಕರಿಸಿದ ಸಂದರ್ಭದಲ್ಲಿ ಸಮಂಜಸ ಕಾರಣ ನೀಡಬೇಕು ಈ ಕುರಿತ ಪ್ರಕ್ರಿಯೆಗೆ ಏಕರೂಪದ ಪ್ರಮಾಣಿತ ಕಾರ್ಯಾಚರಣೆ ಜಾರಿಗೆ ತರಬೇಕು ಎಂದು ಮಾರ್ಗಸೂಚಿ ಪ್ರಕಟಿಸಿ ಪಾಲಿಸುವಂತೆ ಸೂಚಿಸಲಾಗಿದೆ.