ದಾವಣಗೆರೆ: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಪ್ರಕರಣ ನ್ಯಾಯಾಲಯದಲ್ಲಿದ್ದು, ಎಂದು ಮಾಡಬೇಕೆಂದು ನ್ಯಾಯಾಲಯವು ಸೂಚಿಸುತ್ತದೋ ಆಗ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದರು. ಗೃಹ ಸಚಿವರು ಈ ಬಗ್ಗೆ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂಥದ್ದು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದರು.
ಆರ್.ಎಸ್.ಎಸ್. ಅನ್ನು ಸೀಮಿತಗೊಳಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಿಲ್ಲ. ಯಾವುದೇ ಸಂಘ ಸಂಸ್ಥೆಗಳು ಆಯಾ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಹೇಳಿದೆ. ಅವರು ಹಾಗೆ ಭಾವಿಸಿಕೊಂಡಿದ್ದಾರೆ ಅಷ್ಟೆ. ಆರ್.ಎಸ್.ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಹೇಳಿದ್ದಕ್ಕೆಲ್ಲ ನಾವು ಉತ್ತರಿಸಲಾಗುವುದಿಲ್ಲ ಎಂದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಪ್ರಕರಣ ನ್ಯಾಯಾಲಯದಲ್ಲಿದ್ದು, ಎಂದು ಮಾಡಬೇಕೆಂದು ನ್ಯಾಯಾಲಯವು ಸೂಚಿಸುತ್ತದೋ ಆಗ ಚುನಾವಣೆ ನಡೆಸಲಾಗುವುದು. ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿಯೇ ಕಬ್ಬಿನ ಬೆಲೆ ಬಗ್ಗೆ ತೀರ್ಮಾನ ಮಾಡಲಾಗಿದೆ. 50 ರೂ.ಗಳನ್ನು ಎಲ್ಲರೂ ಕೊಡಲೇಬೇಕು. ಕೊಡದಿರುವವರೂ ಕೊಡುತ್ತಾರೆ ಎಂದು ಭಾವಿಸಿದ್ದೇನೆ. ಆದೇಶ ಪಾಲಿಸದ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅತಿವೃಷ್ಟಿಯಿಂದ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು ರೈತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
