ಬೆಂಗಳೂರು: ಸೂರ್ಯ ನಗರದಲ್ಲಿ 100 ಎಕರೆ ವಿಸ್ತೀರ್ಣದಲ್ಲಿ 1650 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳು ಕ್ರೀಡಾಂಗಣದ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದಾರೆ. 80,000 ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಕ್ರಿಕೆಟ್ ಮೈದಾನ, 8 ಒಳಾಂಗಣ ಕ್ರೀಡೆಗಳ ಕ್ರೀಡಾಂಗಣ, 8 ಹೊರಾಂಗಣ ಕ್ರೀಡೆಗಳ ಕ್ರೀಡಾಂಗಣಗಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್, ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಅತಿಥಿ ಗೃಹಗಳು ಇರಲಿವೆ.
ಕರ್ನಾಟಕ ಗೃಹ ಮಂಡಳಿಯಿಂದಲೇ ಯೋಜನೆ ಅನುಷ್ಠಾನಗೊಳಿಸಲಾಗುವುದು. ಕೆಲವೇ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕ್ರೀಡಾಂಗಣ ನಿರ್ಮಿಸುವ ಜೊತೆಗೆ ನಿರ್ವಹಣೆಗೂ ಗೃಹ ಮಂಡಳಿಯ ಅಧಿಕಾರಿಗಳು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರಾದ ಜಮೀರ್ ಅಹ್ಮದ್, ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಹಲವರು ಇದ್ದರು.
ಕರ್ನಾಟಕ ಗೃಹ ಮಂಡಳಿ ಸೂರ್ಯಸಿಟಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 100 ಎಕರೆ ವಿಸ್ತೀರ್ಣದ ಕ್ರೀಡಾಂಗಣದ ಬಗ್ಗೆ ಮುಖ್ಯಮಂತ್ರಿ @siddaramaiah ಅವರು ಇಂದು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. pic.twitter.com/DbSKJ1MfJr
— CM of Karnataka (@CMofKarnataka) August 8, 2025