ನವದೆಹಲಿ: ತಂದೆಯ ಜಾತಿಯಲ್ಲಿಯೇ ಮಗುವನ್ನು ಗುರುತಿಸಬೇಕು ಎನ್ನುವ ಪದ್ಧತಿಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ತಾಯಿಯ ಜಾತಿ ಆಧಾರದಲ್ಲಿಯೂ ಪುತ್ರಿಯರು ಪ್ರಮಾಣ ಪತ್ರ ಪಡೆಯಲು ಅರ್ಹರು ಎಂದು ತೀರ್ಪು ನೀಡಿದೆ. ಈ ಮೂಲಕ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ ನೀಡಿದೆ.
ಪುದುಚೇರಿಯ ಎಸ್.ಸಿ. ಮಹಿಳೆಯೊಬ್ಬರು ಮಕ್ಕಳಿಗೆ ತಮ್ಮದೇ ಜಾತಿ ಆಧಾರದಲ್ಲಿ ಎಸ್ಸಿ ಪ್ರಮಾಣ ಪತ್ರ ನೀಡಬೇಕೆಂದು ಕೋರಿದ್ದರು. ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಮಹಿಳೆ ಅನ್ಯ ಜಾತಿ ವ್ಯಕ್ತಿಯನ್ನು ಮದುವೆಯಾಗಿದ್ದರು. ಸಂಪ್ರದಾಯದ ಪ್ರಕಾರ ಮದುವೆಯ ನಂತರ ಪತಿ ಇವರ ಮನೆಯಲ್ಲಿ ವಾಸವಾಗಿದ್ದರು. ಹೀಗಿರುವಾಗ ಪ್ರಮಾಣ ಪತ್ರ ನೀಡುವಾಗಲೂ ತಮ್ಮ ಜಾತಿಯನ್ನೇ ಪರಿಗಣಿಸಬೇಕು ಎಂದು ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಮದ್ರಾಸ್ ಹೈಕೋರ್ಟ್ ಇದಕ್ಕೆ ಒಪ್ಪಿತ್ತು,
ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಮದ್ರಾಸ್ ಹೈಕೋಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮಕ್ಕಳು ಮೇಲ್ಜಾತಿಯ ಕುಟುಂಬದಲ್ಲೇ ಬೆಳೆದರೂ ಎಸ್.ಸಿ. ಎಂದು ಗುರುತಿಸಿಕೊಳ್ಳಲು ಅರ್ಹರು. ತಾಯಿ ಎಸ್.ಸಿ. ಸಮುದಾಯಕ್ಕೆ ಸೇರಿದ್ದರೆ ಅದೇ ಜಾತಿಯ ಪ್ರಮಾಣಪತ್ರ ನೀಡಬಹುದು ಎಂದು ಹೇಳಿದೆ.
