ನವದೆಹಲಿ: ಕಳೆದ ಒಂದು ದಶಕದ ಅವಧಿಯಲ್ಲಿ ದೇಶದಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳವಾಗಿದ್ದು, ರಫ್ತಿನ ಪ್ರಮಾಣ ನಿರಂತರವಾಗಿ ಕಡಿಮೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯುಷ್ ಗೋಯಲ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
2015 -16ನೇ ಸಾಲಿನಲ್ಲಿ 6,284 ಟನ್ ಅಡಿಕೆ ರಫ್ತು ಮಾಡಲಾಗಿದ್ದು, 2024- 25 ನೇ ಸಾಲಿನಲ್ಲಿ 2396 ಟನ್ ಗೆ ಕುಸಿದಿ.ದೆ 2015 -16 ರಿಂದ 2024 -25 ರವರೆಗೆ 10 ವರ್ಷದಲ್ಲಿ ಅಡಿಕೆ ರಫ್ತು ಮೌಲ್ಯ ಶೇಕಡ 35.69ರಷ್ಟು ಹೆಚ್ಚಳವಾಗಿದೆ. ಆದರೆ ದಶಕದ ಹಿಂದೆ ಕೆಜಿಗೆ 250 ರಿಂದ 300 ರೂ. ಆಸುಪಾಸಿನಲ್ಲಿದ್ದ ಅಡಿಕೆಯ ದರ ಈಗ 450 ರೂ. ದಾಟಿದ್ದು ಮೌಲ್ಯ ಹೆಚ್ಚಳವಾಗಿದೆ.
2016 -17 ನೇ ಸಾಲಿನಲ್ಲಿ 16,150 ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. 2024 -25 ನೇ ಸಾಲಿನಲ್ಲಿ 42,236 ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. 2022- 23 ರಲ್ಲಿ 78,233 ಟನ್ ಅಡಿಕೆ ಆಮದಾಗಿತ್ತು.
ಮಯನ್ಮಾರ್, ಶ್ರೀಲಂಕಾ, ಇಂಡೋನೇಷ್ಯಾ, ಬಾಂಗ್ಲಾದೇಶ, ನೇಪಾಳ, ಒಮನ್ ಮಲೇಷಿಯಾ, ಸಿಂಗಾಪುರ, ಥೈಲ್ಯಾಂಡ್ ನಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಬಹುಪಾಲು ಅಡಿಕೆ ಇಂಡೋನೇಷ್ಯಾ, ಮಯನ್ಮಾರ್, ಶ್ರೀಲಂಕಾದಿಂದ ಆಮದಾಗುತ್ತಿದೆ ಎನ್ನಲಾಗಿದೆ.
ಇದರಿಂದ ಬೆಲೆ ಕುಸಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಸುಂಕ ಮುಕ್ತ ಉತ್ಪನ್ನ ಆಮದು ಪಟ್ಟಿಯಿಂದ ಅಡಿಕೆ ಹೊರಗಿಡಬೇಕು. ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಆಮದಾಗುವ ಉತ್ಪನ್ನಗಳಿಗೆ ಸಾಮಾನ್ಯ ಸುಂಕ ವಿಧಿಸುವ ವ್ಯವಸ್ಥೆ ಮರು ಸ್ಥಾಪಿಸಬೇಕು. ಅಡಿಕೆ ಆಮದಿಗೆ ಕಡಿವಾಣ ಹಾಕಬೇಕೆಂದು ರೈತರು ಮತ್ತು ರೈತ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ.
