ಕಾರವಾರ: ಓಲಾ, ಉಬರ್ ರೀತಿಯಲ್ಲಿ ಆ್ಯಪ್ ಬಳಸಿ ಟ್ಯಾಕ್ಸಿ, ಆಟೋ ಬುಕ್ ಮಾಡುವ ರೀತಿಯಲ್ಲಿ ಇನ್ನು ಮುಂದೆ ರಾಜ್ಯದಲ್ಲಿ ಆಂಬುಲೆನ್ಸ್ ಗಳನ್ನು ಕೂಡ ಬುಕ್ ಮಾಡಿ ಕರೆಸಬಹುದಾಗಿದೆ.
ಈಗಾಗಲೇ ಗುರು ಗ್ರಾಮದಲ್ಲಿ ಖಾಸಗಿ ಕಂಪನಿಯೊಂದು ಇಂತಹ ಸೇವೆ ಆರಂಭಿಸಿದ್ದು ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಆಂಬುಲೆನ್ಸ್ ಸೇವೆಯನ್ನು ಕಲ್ಪಿಸಲು ಮುಂದಾಗಿದೆ. ಈ ಆಂಬುಲೆನ್ಸ್ ಗಳಿಗೆ ಸರ್ಕಾರದಿಂದಲೇ ದರ ನಿಗದಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮುಂದಿನ ಅಧಿವೇಶನದಲ್ಲಿ ಈ ಕುರಿತಾದ ಮಸೂದೆ ಮಂಡಿಸಲಾಗುವುದು. ಆ್ಯಪ್ ನಲ್ಲಿಯೇ ಆಂಬುಲೆನ್ಸ್ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗುವುದು. ರಾಜ್ಯದಲ್ಲಿ ಅನೇಕ ಕಂಪನಿಗಳು ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದು, ಅವುಗಳ ಬಗ್ಗೆ ಸಾಕಷ್ಟು ದೂರುಗಳಿವೆ. ಹೀಗಾಗಿ ಆಂಬುಲೆನ್ಸ್ ಗಳಲ್ಲಿ ಯಾವ ವ್ಯವಸ್ಥೆ ಇರಬೇಕು. ದರ ಎಷ್ಟಿರಬೇಕು ಎಂಬುದನ್ನು ಸರ್ಕಾರದಿಂದ ಕಾಯ್ದೆ ರೂಪಿಸಲಾಗುವುದು. ಶಾಸನ ಜಾರಿಯಾದ ನಂತರ ಆಂಬುಲೆನ್ಸ್ ಸೇವೆ ಒದಗಿಸುವವರು ಖಾಸಗಿ ಆಸ್ಪತ್ರೆಗಳ ರೀತಿ ನೋಂದಣಿ ಮಾಡಿಕೊಳ್ಳಬೇಕು. ಆಂಬುಲೆನ್ಸ್ ಗಳಿಗೆ ಸೇವೆಯ ಆಧಾರದಲ್ಲಿ ಸರ್ಕಾರವೇ ದರ ನಿಗದಿ ಮಾಡಲಿದೆ. ಆ್ಯಪ್ ನಲ್ಲಿ ಬುಕ್ ಮಾಡಬೇಕಿದೆ.
ಆಂಬುಲೆನ್ಸ್ ಅಗತ್ಯ ಇರುವವರು ಮೊಬೈಲ್ ಆ್ಯಪ್ ಬಳಸಿಕೊಂಡು ಸೇವೆ ಪಡೆದುಕೊಳ್ಳಬಹುದಾಗಿದೆ. ರಾಜ್ಯದಲ್ಲಿನ ವೈದ್ಯಕೀಯ ಆಂಬುಲೆನ್ಸ್ ಸೇವೆಯನ್ನು ಇನ್ನು ಮುಂದೆ ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆ ಕಾನೂನಿನಡಿ ತರಲು ನಿರ್ಧರಿಸಲಾಗಿದ್ದು, ಬರುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಕಾಯ್ದೆ ತರಲಾಗುವುದು ಎಂದು ಹೇಳಲಾಗಿದೆ.