BIG NEWS: ರಾಜ್ಯದಲ್ಲಿ ರಸಗೊಬ್ಬರ ಕೊರತೆ ಬಗ್ಗೆ ವಾಸ್ತವ ತಿಳಿಸಿದ ಕೃಷಿ ಇಲಾಖೆ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ ಎಲ್ಲಾ ರಸಗೊಬ್ಬರಗಳನ್ನು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮತ್ತು ಸರಬರಾಜು ಮಾಡಲಾಗಿರುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಕಂಡು ಬಂದಿರುವುದಿಲ್ಲ ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ರಸಗೊಬ್ಬರ ಕೊರತೆಗೆ ಮೂಲ ಕಾರಣ:

ಪ್ರಸಕ್ತ ಸಾಲಿನಲ್ಲಿ ಮಾತ್ರ ಆರಂಭಿಕ ಶುಲ್ಕ ಪರಿಗಣಿಸಿ, ಕೇಂದ್ರ ಸರ್ಕಾರದಿಂದ ರಸಗೊಬ್ಬರ ಹಂಚಿಕೆ ಮತ್ತು ಸರಬರಾಜು ಪ್ರಕ್ರಿಯೆ ಜರುಗಿಸಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಪ್ರಾರಂಬಿಕ ದಾಸ್ತಾನನ್ನು ಪರಿಗಣಿಸಿ, ಯೂರಿಯಾ ರಸಗೊಬ್ಬರದ ಕಡಿಮೆ ಹಂಚಿಕೆ ಮಾಡಿರುವುದು ಕೊರತೆಗೆ ಮೂಲ ಕಾರಣವಾಗಿದೆ.

ರಾಜ್ಯದ ಬೆಳೆ ಪದ್ಧತಿಯನ್ನು ಆಧರಿಸಿ ಮುಂಗಾರು ಹಂಗಾಮಿಗೆ ಮುಂಚಿತವಾಗಿ ಕೇಂದ್ರ ಸರ್ಕಾರಕ್ಕೆ 12.95 ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರದಿಂದ 11.17 ಲಕ್ಷ ಮೆ.ಟನ್ ಹಂಚಿಕೆ ನಿಗದಿಪಡಿಸಲಾಗಿರುತ್ತದೆ.

ಏಪ್ರಿಲ್ ಮಾಹೆಯಿಂದ ಜುಲೈ ಮಾಹೆಯವರೆಗೆ 3.02ಲಕ್ಷ ಮೆ.ಟನ್ ಡಿ.ಎ.ಪಿ ರಸಗೊಬ್ಬರದ ಬೇಡಿಕೆ ಇದ್ದು ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ 2.21 ಲಕ್ಷ ಮೆ.ಟನ್ ಸರಬರಾಜಾಗಿದ್ದು, ಇನ್ನೂ 81,000 ಮೆ.ಟನ್ ಸರಬರಾಜು ಬಾಕಿ ಇರುತ್ತದೆ.

ರಾಜ್ಯದಲ್ಲಿ ಡಿ.ಎ.ಪಿ. ಕೊರತೆ ಕಂಡು ಬಂದಾಗ ಕೃಷಿ ಸಚಿವರ ನಿರ್ದೇಶನದಂತೆ ಪರ್ಯಾಯ ರಸಗೊಬ್ಬರಗಳ ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸಿ, ಪ್ರಸ್ತುತ, ಡಿ.ಎ.ಪಿ. ರಸಗೊಬ್ಬರದ ಕೊರತೆಯನ್ನು ನೀಗಿಸಲಾಗಿದೆ.

ಏಪ್ರಿಲ್ ಮಾಹೆಯಿಂದ ಜುಲೈ ಮಾಹೆಯವರೆಗೆ 6.80ಲಕ್ಷ ಮೆ.ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ 5.35 ಲಕ್ಷ ಮೆ.ಟನ್ ಸರಬರಾಜಾಗಿದ್ದು, ಇನ್ನೂ 1.45 ಲಕ್ಷ ಮೆ.ಟನ್ ಸರಬರಾಜು ಬಾಕಿ ಇರುತ್ತದೆ.

ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಸರಬರಾಜು ಮಾಡಿರುವ ರಸಗೊಬ್ಬರವನ್ನು ಸಮರ್ಪಕವಾಗಿ ಎಲ್ಲಾ ಜಿಲ್ಲೆಗಳಿಗೆ ಹಂಚಿಕೆ ಮಾಡಿ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಭಾಯಿಸಲಾಗಿರುತ್ತದೆ.

ರಾಜ್ಯದಿಂದ ರಸಗೊಬ್ಬರ ಪೂರೈಕೆಗೆ ಆರು ಬಾರಿ ಮನವಿ:

ಕೇಂದ್ರ ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಇಲಾಖೆ ವತಿಯಿಂದ ಏಪ್ರಿಲ್ ಮಾಹೆಯಿಂದ ಇಲ್ಲಿಯವರೆಗೆ ಆರು ಬಾರಿ  ಪತ್ರಗಳನ್ನು ಬರೆದು ಹಂಚಿಕೆಗೆ  ಅನುಗುಣವಾಗಿ ಅವಶ್ಯವಿರುವ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಲಾಗಿರುತ್ತದೆ.

ರಾಜ್ಯದ ಕೃಷಿ ಸಚಿವರು ಕೇಂದ್ರ ಸರ್ಕಾರದ ರಸಗೊಬ್ಬರ ಖಾತೆ ಸಚಿವರಿಗೆ ಅಗತ್ಯವಿರುವ ಡಿ.ಎ.ಪಿ. ರಸಗೊಬ್ಬರದ ಪೂರೈಕೆಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಕೃಷಿ ಸಚಿವರೇ ಖುದ್ದಾಗಿ, ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನು ಇದೇ ಜುಲೈ 7 ರಂದು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಮಾಡಲು ಮನವಿ ಮಾಡಿರುತ್ತಾರೆ.

ರಾಜ್ಯದಲ್ಲಿ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರದ ಕಡಿಮೆ ಪೂರೈಕೆಯನ್ನು ಮನಗಂಡು, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ರಸಗೊಬ್ಬರ ಖಾತೆ ಸಚಿವರಿಗೆ,  ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಪೂರೈಕೆಗೆ ಜುಲೈ 17 ಮತ್ತು 25ರಂದು ಪತ್ರ ಮುಖೇನ ಮನವಿ ಸಲ್ಲಿಸಿರುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರದಿಂದ ಹಂಚಿಕೆಗನುಗುಣವಾಗಿ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡದಿರುವುದರಿಂದ ರಾಜ್ಯದಲ್ಲಿ ಅಲ್ಲಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಕಂಡು ಬಂದಿರುತ್ತದೆ. ಈ ಸಂಬಂಧವಾಗಿ ರೈತರು ವಿವಿಧ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರದ ಪೂರೈಕೆ ಬಗ್ಗೆ ಅಹವಾಲುಗಳನ್ನು ಸಲ್ಲಿಸಿರುತ್ತಾರೆ.

ಯೂರಿಯಾ ಬೇಡಿಕೆ ಪ್ರಮುಖ ಕಾರಣಗಳು:

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಮುಂಚಿತವಾಗಿ ಉತ್ತಮ ಮಳೆಯಾಗಿದ್ದು, ಸಾಮಾನ್ಯ ಅವಧಿಗಿಂತ ಮುಂಚೆ ಬಿತ್ತನೆ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಬಿತ್ತನೆ ವಿಸ್ತೀರ್ಣ ಹಿಂದಿನ ಸಾಲಿಗೆ ಹೋಲಿಸಿದಲ್ಲಿ ಹೆಚ್ಚಾಗಿರುತ್ತದೆ. ಹೆಚ್ಚು ರಸಗೊಬ್ಬರ ಅವಶ್ಯವಿರುವ ಮುಸುಕಿನ ಜೋಳದ ವಿಸ್ತೀರ್ಣವು ಅಂದಾಜು 2.00ಲಕ್ಷ ಹೆಕ್ಟೇರ್ ಗಣನೀಯವಾಗಿ ಹೆಚ್ಚಳವಾಗಿದೆ. ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಅಂದಾಜು 13,000 ಹೆಕ್ಟೇರ್ ಪ್ರದೇಶದಲ್ಲಿ ಮರುಬಿತ್ತನೆ ಕೈಗೊಳ್ಳಲಾಗಿರುತ್ತದೆ. ತುಂಗಭದ್ರಾ, ಕೃಷ್ಣಾ, ಕಾವೇರಿ ಇತ್ಯಾದಿ ಪ್ರಮುಖ ಜಲಾಶಯಗಳಿಂದ ಅವಧಿಗಿಂತ ಮುಂಚಿತವಾಗಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಬಿಟ್ಟಿರುವುದರಿಂದ ಮುಂಚಿತವಾಗಿ ನಾಟಿ ಕೈಗೊಳ್ಳಲಾಗಿರುವುದು ಯೂರಿಯಾ ಮತ್ತು ರಸಗೊಬ್ಬರ ಬೇಡಿಕೆ ಪ್ರಮುಖ ಕಾರಣವಾಗಿದೆ.

ಇಲಾಖೆಯ ಅಧಿಕಾರಿಗಳು ಪ್ರತಿ ಮಂಗಳವಾರ ಕೇಂದ್ರ ಸರ್ಕಾರದಿಂದ ಜರುಗಿಸುವ ವಿಡಿಯೋ ಸಂವಾದದಲ್ಲಿ ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿರುತ್ತಾರೆ. ಅಲ್ಲದೇ, ಕೇಂದ್ರ ಸರ್ಕಾರದ ರಸಗೊಬ್ಬರ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಾಜ್ಯದಲ್ಲಿ ಅವಶ್ಯವಿರುವ ರಸಗೊಬ್ಬರ ಪೂರೈಕೆಗೆ ಅವಶ್ಯ ಕ್ರಮ ವಹಿಸುತ್ತಿದ್ದಾರೆ.

ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ನ್ಯಾನೋ ರಸಗೊಬ್ಬರ ಬಳಕೆಗೆ ಇಲಾಖೆಯಿಂದ ವ್ಯಾಪಕ ಪ್ರಚಾರ ನೀಡಿ ಅರಿವು ಮೂಡಿಸಲಾಗುತ್ತಿದೆ. ಬೆಳೆ, ಮಣ್ಣು, ಮಾನವ, ಜಾನುವಾರು ಮತ್ತು ಪರಿಸರದ ಆರೋಗ್ಯದ ದೃಷ್ಟಿಯಿಂದ ಯೂರಿಯಾ ಬಳಕೆಯನ್ನು ಕಡಿತಗೊಳಿಸಲು ರೈತರಲ್ಲಿ ಮನವಿ ಮಾಡಲಾಗಿದೆ.

ಆರಂಭಿಕ ಶುಲ್ಕ ಪರಿಗಣಿಸದೆ ಕೊರತೆಯಾಗಿರುವ 81,000 ಮೆ.ಟನ್ ಡಿ.ಎ.ಪಿ. ಮತ್ತು 1,45,000 ಮೆ.ಟನ್. ಯೂರಿಯಾ ರಸಗೊಬ್ಬರವನ್ನು ಕೇಂದ್ರ ಸರ್ಕಾರವು ಪೂರೈಸಿದಲ್ಲಿ ರೈತರ ಬವಣೆ ನೀಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಹ ಅಗತ್ಯ ಕ್ರಮ ಜರುಗಿಸಬೇಕಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read