ಅಮರಾವತಿ: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯ ಎಂದೇ ಖ್ಯಾತವಾಗಿರುವ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಉದ್ಯಮಿಯೊಬ್ಬರು 140 ಕೋಟಿ ರೂಪಾಯಿ ಮೌಲ್ಯದ 121 ಕೆಜಿ ಚಿನ್ನವನ್ನು ಕಾಣಿಕೆಯಾಗಿ ನೀಡಲು ಮುಂದೆ ಬಂದಿದ್ದಾರೆ. ವ್ಯಕ್ತಿಯೊಬ್ಬರು ತಿರುಪತಿಗೆ ನೀಡುತ್ತಿರುವ ಅತಿ ದೊಡ್ಡ ಪ್ರಮಾಣದ ಚಿನ್ನದ ಕಾಣಿಕೆ ಇದಾಗಿದೆ ಎಂದು ಹೇಳಲಾಗಿದೆ.
ಹೆಸರು ಹೇಳಲು ಬಯಸದ ವೆಂಕಟೇಶ್ವರ ಸ್ವಾಮಿಯ ಭಕ್ತರೊಬ್ಬರು ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾಗಿದ್ದರು. ಅವರು 121 ಕೆಜಿ ಚಿನ್ನವನ್ನು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ದೇಣಿಗೆಯಾಗಿ ನೀಡಲು ಮುಂದೆ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಮಂಗಳಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಕಂಪನಿಯೊಂದನ್ನು ಸ್ಥಾಪಿಸಲು ಬಯಸಿದ ಭಕ್ತ ಅದನ್ನು ಪ್ರಾರಂಭಿಸಿ ಉದ್ಯಮದಲ್ಲಿ ಯಶಸ್ವಿಯಾಗಿದ್ದು, ದೇವರಿಗೆ ಕೃತಜ್ಞತೆ ಸಲ್ಲಿಸಲು ದೇಣಿಗೆ ನೀಡುತ್ತಿದ್ದಾರೆ. ಅವರು ಅನಾಮಧೇಯರಾಗಿ ಉಳಿಯಲು ಬಯಸಿದ್ದಾರೆ. ತಮ್ಮ ಕಂಪನಿಯ ಶೇಕಡ 60ರಷ್ಟು ಶೇರುಗಳನ್ನು ಮಾಡಿ ಸುಮಾರು 6 ಸಾವಿರದಿಂದ 7 ಸಾವಿರ ಕೋಟಿ ರೂಪಾಯಿಯಷ್ಟು ಗಳಿಸಿದ್ದಾರೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ನಿತ್ಯದ ಪೂಜೆಗೆ ತಿರುಪತಿ ತಿಮ್ಮಪ್ಪನಿಗೆ 120 ಕೆಜಿ ಚಿನ್ನ ಬಳಸಲಾಗುತ್ತದೆ ಎನ್ನುವ ಮಾಹಿತಿ ಇದ್ದು, ಅದಕ್ಕಿಂತ ಒಂದು ಕೆಜಿ ಹೆಚ್ಚಿನ ಚಿನ್ನವನ್ನು ದೇಣಿಗೆಗಾಗಿ ನೀಡಲು ಉದ್ಯಮಿ ಬಯಸಿದ್ದಾರೆ.