ಬೆಂಗಳೂರು: ಬೆಂಗಳೂರು ರಾಜ್ಯಾದ್ಯಂತ ಜುಲೈ 12ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ನ್ಯಾಯಾಲಯಗಳಲ್ಲಿ ಒಟ್ಟು 58.67 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 2878 ಕೋಟಿ ರೂ. ಪರಿಹಾರ ಕಲ್ಪಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ವಿ. ಕಾಮೇಶ್ವರರಾವ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಲೋಕ ಅದಾಲತ್ ನಲ್ಲಿ ಒಟ್ಟು 1022 ಪೀಠಗಳನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ ಹೈಕೋರ್ಟ್ ಗಲ್ಲಿದ್ದ 1182, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿದ್ದ 3,09,995 ಪ್ರಕರಣ ಸೇರಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಒಟ್ಟು 3,11,177 ಮತ್ತು 55,56,255 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದ್ದಾರೆ.
1756 ವೈವಾಹಿಕ ಪ್ರಕರಣಗಳನ್ನು ಪರಿಹರಿಸಿ 331 ದಂಪತಿ ರಾಜೀ ಸಂಧಾನದ ಮೂಲಕ ಮತ್ತೆ ಒಂದಾಗಿ ಜೀವನ ನಡೆಸುತ್ತಿದ್ದಾರೆ. 4961 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸಂತ್ರಸ್ತರಿಗೆ 290 ಕೋಟಿ ರೂಪಾಯಿ ಪರಿಹಾರ ಕಲ್ಪಿಸಲಾಗಿದೆ. 13,542 ಚೆಕ್ ಬೌನ್ಸ್ ಪ್ರಕರಣಗಳನ್ನು ವಿಲೇವಾರಿ ಮಾಡಿ 572 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದ್ದಾರೆ.