BIG NEWS: 2023 ರ ಕ್ರಿಕೆಟ್‌ ಹಬ್ಬಕ್ಕೆ ಮುಹೂರ್ತ ಫಿಕ್ಸ್‌; ‘ವಿಶ್ವಕಪ್’ ‌ನಲ್ಲಿ ಮುಖಾಮುಖಿಯಾಗಲಿವೆ ಭಾರತ – ಪಾಕಿಸ್ತಾನ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಕ್ರಿಕೆಟ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. 2023ರ ICC ಪುರುಷರ ಕ್ರಿಕೆಟ್ ವಿಶ್ವಕಪ್‌ಗಾಗಿ ಪಂದ್ಯಗಳ  ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 5ರಿಂದ ಈ ಕ್ರಿಕೆಟ್‌ ಹಬ್ಬ ಶುರುವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್‌ಗೆ ಚಾಲನೆ ಸಿಗಲಿದೆ. ಮೊದಲು ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೆಣೆಸಲಿವೆ. ಆತಿಥೇಯ ಭಾರತ ಅಕ್ಟೋಬರ್ 8 ರಂದು ತನ್ನ ಮೊದಲ ಪಂದ್ಯವನ್ನ ಆಡಲಿದೆ.

ಐದು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ತನ್ನ ಅಭಿಯಾನವನ್ನು ಟೀಂ ಇಂಡಿಯಾ ಪ್ರಾರಂಭಿಸಲಿದೆ. ಒಟ್ಟು 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಮೊದಲ ಎಂಟು ತಂಡಗಳು ಈಗಾಗಲೇ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಮೂಲಕ ಅರ್ಹತೆ ಪಡೆದಿವೆ. ಜುಲೈ 9 ರಂದು ಜಿಂಬಾಬ್ವೆಯಲ್ಲಿ ಮುಕ್ತಾಯಗೊಳ್ಳುವ ಕ್ವಾಲಿಫೈಯರ್ ಪಂದ್ಯಾವಳಿಯ ಕೊನೆಯಲ್ಲಿ ಅಂತಿಮ ಎರಡು ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ.

ಪ್ರತಿ ತಂಡವು ಇತರ ಒಂಬತ್ತು ತಂಡಗಳನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಡುತ್ತದೆ ಮತ್ತು ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತ, ಸೆಮಿ-ಫೈನಲ್‌ಗಳಿಗೆ ಅರ್ಹತೆ ಪಡೆಯುತ್ತವೆ. ಪಂದ್ಯಾವಳಿಯಲ್ಲಿ ಹಲವಾರು ನಿರ್ಣಾಯಕ ಘರ್ಷಣೆಗಳಿರೋದು ವಿಶೇಷ. ಆಸ್ಟ್ರೇಲಿಯಾ ಅಕ್ಟೋಬರ್ 13 ರಂದು ಲಕ್ನೋದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 15ರಂದು ಭಾನುವಾರ ಅಹಮದಾಬಾದ್‌ನಲ್ಲಿ ನಿಗದಿಯಾಗಿದೆ. ಅಕ್ಟೋಬರ್ 20 ರಂದು ಪಾಕಿಸ್ತಾನವು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಮರುದಿನ ಮುಂಬೈನಲ್ಲಿ ಆಯೋಜಿಸಲಾಗಿರೋ ಮ್ಯಾಚ್‌ನಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಸೆಣೆಸಲಿವೆ. ಭಾರತ ತಂಡ ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ. 2019ರ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಹವಣಿಸುತ್ತಿದೆ.

ಆಸ್ಟ್ರೇಲಿಯಾ ನವೆಂಬರ್ 4 ರಂದು ಅಹಮದಾಬಾದ್‌ನಲ್ಲಿ  ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.  ಅಕ್ಟೋಬರ್ 29 ರಂದು ಲಕ್ನೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್‌ ಎದುರಾಳಿ. ನವೆಂಬರ್ 12 ರಂದು ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಗ್ರೂಪ್‌ ಹಂತದ ಪಂದ್ಯ ನಡೆಯಲಿದೆ.

ನಾಕೌಟ್ ಹಂತಗಳು

ಮೊದಲ ಸೆಮಿಫೈನಲ್ ಬುಧವಾರ ನವೆಂಬರ್ 15 ರಂದು ಮುಂಬೈನಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ನವೆಂಬರ್‌ 16ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಎರಡೂ ಸೆಮಿಫೈನಲ್‌ಗಳು ಮೀಸಲು ದಿನವನ್ನು ಹೊಂದಿರುತ್ತವೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್‌ ಫೈನಲ್ ಪಂದ್ಯವನ್ನು ನಿಗದಿಪಡಿಸಲಾಗಿದೆ. ನವೆಂಬರ್ 20 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ.

ಎಲ್ಲಾ ಮೂರು ನಾಕ್-ಔಟ್ ಪಂದ್ಯಗಳು ಡೇ-ನೈಟ್‌ ಆಗಿರುತ್ತವೆ. ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತವೆ. ಹೈದರಾಬಾದ್, ಅಹಮದಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾ  ಹೀಗೆ ಒಟ್ಟು 10 ಮೈದಾನಗಳಲ್ಲಿ ವಿಶ್ವಕಪ್‌ ಪಂದ್ಯಗಳನ್ನು ಆಯೋಜಿಸಲಾಗಿದೆ. ಹೈದರಾಬಾದ್ ಜೊತೆಗೆ ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಅಭ್ಯಾಸ ಪಂದ್ಯಗಳು ನಡೆಯಲಿವೆ.

The schedule for Cricket World Cup 2023

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read