ಬೆಂಗಳೂರು: ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಓದಬೇಕು. ವಿದ್ಯಾಭ್ಯಾಸದ ಕಡೆ ಗಮನಕೊಡಬೇಕು. ಕಾಲೇಜು ಸಮಯವನ್ನು ಎಂಜಾಯ್ ಮಾಡಬೇಕು ಹೊರತು ಕಾಲೇಜಿನಲ್ಲಿ ಚುನಾವಣೆಯನ್ನು ಮಾಡುವುದು ಸರಿಯಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಆರ್. ವಿ. ಡೆಂಟಲ್ ಕಾಲೇಜ್ ನಲ್ಲಿ ನಡೆದ ಯುವ ಸಂಭಾಷಣೆ, ಚರ್ಚೆ ವಿತ್ ಕಾಮನ್ ಮ್ಯಾನ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ವಿದ್ಯಾರ್ಥಿಯೊಬ್ಬ ಕಾಲೇಜಿನಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕಾಲೇಜಿನಲ್ಲಿ ಚುನಾವಣೆ ಬೇಡ. ಓದುವ ಸಮಯದಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಡಿಜಿಟಲ್ ಶಿಕ್ಷಣದ ಬಗ್ಗೆ ಮಾತನಾಡಿದ ಸಿಎಂ, ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಇನ್ನಷ್ಟು ಹೆಚ್ಚಲಿದೆ. ಸರ್ಕಾರದಿಂದಲೇ ತಂತ್ರಾಂಶ ಸಿದ್ಧವಾಗುತ್ತಿದೆ. ಇನ್ನೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಡಿಜಿಟಲೈಸೇಷನ್ ತಲುಪಿಲ್ಲ. ಟ್ಯಾಬ್, ಮೊಬೈಲ್ , ಇಂಟರ್ ನೆಟ್ ಅನೇಕ ವ್ಯವಸ್ಥೆಗಳು ಮಕ್ಕಳ ಬಳಿ ಇಲ್ಲ. ಇದೆಲ್ಲ ತಲುಪಲು ಸಮಯಬೇಕು. ಸರ್ಕಾರದಿಂದಲೇ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ಧ ಪಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ಗುರಿ ಸಿಕ್ಕಿದೆ. ಮೋದಿಯವರಿಗೆ ಹೊಸತನವನ್ನು ಕಲಿಯುವ ಹಂಬಲವಿದೆ. ಎಲ್ಲವನ್ನೂ ಪಾಸಿಟಿವ್ ಆಗಿ ನೋಡುವ ವ್ಯಕ್ತಿ. ಅವರೊಂದಿಗೆ ಹತ್ತು ನಿಮಿಷ ಕಾಲ ಕಳೆದರು ಅವರಿಂದ ಪ್ರತಿಯೊಬ್ಬರು ಸ್ಫೂರ್ತಿಗೊಳ್ಳುತ್ತಾರೆ. ಇದು ನಮ್ಮ ಕರ್ತವ್ಯದ ಕಾಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ತಿಳಿಸಿದರು.