
ಈ ಬಾರಿಯ ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ಹೈಕಮಾಂಡ್ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹೀಗಾಗಿ ಯಡಿಯೂರಪ್ಪ, ಈಶ್ವರಪ್ಪ, ಹಾಲಾಡಿ ಸೇರಿದಂತೆ ಹಲವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸುವಂತೆ ಮಾಡಲಾಗಿತ್ತು.
ಆದರೆ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ನೆಹರು ಓಲೇಕರ್ ಮೊದಲಾದವರು ಪಕ್ಷದ ನಿರ್ಧಾರಕ್ಕೆ ಸಿಡಿದೆದ್ದಿದ್ದು ಈ ಪೈಕಿ ಲಕ್ಷ್ಮಣ ಸವದಿ ಈಗಾಗಲೇ ಕಾಂಗ್ರೆಸ್ ಸೇರ್ಪಡೆಗೊಂಡು ಅಥಣಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಜಗದೀಶ್ ಶೆಟ್ಟರ್, ನೆಹರು ಓಲೇಕರ್ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.
ಇದರ ಮಧ್ಯೆ ಬಿಜೆಪಿಯ ಮತ್ತಿಬ್ಬರು ಹಿರಿಯ ನಾಯಕರಿಗೂ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗಿದೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎ. ರಾಮದಾಸ್ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದೆ.
ಕೊನೆಯ ಕ್ಷಣದವರೆಗೂ ಟಿಕೆಟ್ ಗಾಗಿ ಈ ಇಬ್ಬರು ನಾಯಕರು ಪ್ರಯತ್ನ ನಡೆಸಿದ್ದು, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿಯೇ ನಿರಾಸೆಯಿಂದ ಮೈಸೂರಿಗೆ ಹಿಂದಿರುಗಿರುವ ಎ. ರಾಮದಾಸ್ ತಮ್ಮ ಬೆಂಬಲಿಗರ ಎದುರು ಕಣ್ಣೀರಿಟ್ಟಿದ್ದು, ಟಿಕೆಟ್ ಘೋಷಣೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

 
		 
		 
		 
		 Loading ...
 Loading ... 
		 
		 
		