BIG NEWS: ಜೋರಾಗಿ ಹಾಡು ಪ್ಲೇ ಮಾಡುತ್ತೀರಾ….? ಹಾಗಿದ್ರೆ ಎಚ್ಚರ……! ಇನ್ಮುಂದೆ ನಮ್ಮ ಮೆಟ್ರೋ ರೈಲಿನಲ್ಲಿ ಜೋರಾಗಿ ಹಾಡು ಕೇಳುವಂತಿಲ್ಲ

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಇರುವಾಗ ಕೆಲವರು ತಮ್ಮ ಮೊಬೈಲ್ ನಲ್ಲಿ ಜೋರಾಗಿ ಹಾಡನ್ನು ಪ್ಲೇ ಮಾಡುತ್ತಾರೆ. ಇದು ಇತರರಿಗೆ ಕಿರಿಕಿರಿ ಎಂದೆನಿಸುತ್ತದೆ. ಇದಕ್ಕಾಗಿಯೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ನಮ್ಮ ಮೆಟ್ರೋ ರೈಲುಗಳಲ್ಲಿ ಧ್ವನಿವರ್ಧಕಗಳಲ್ಲಿ ಸಂಗೀತ ನುಡಿಸುವುದನ್ನು ನಿಷೇಧಿಸಿದೆ. ಆದರೆ, ಸಂಗೀತ ಆಲಿಸುವಾಗ ಪ್ರಯಾಣಿಕರು ಇಯರ್‌ಫೋನ್ ಬಳಸಬಹುದಾಗಿದೆ. ಜೋರಾಗಿ ಮೊಬೈಲ್ ನಲ್ಲಿ ಪ್ಲೇ ಮಾಡುವಂತಿಲ್ಲ.

ಈ ಸಂಬಂಧ ಗುರುವಾರ ಮೆಟ್ರೋ ರೈಲುಗಳಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, ರೈಲಿನೊಳಗೆ ಪ್ರಯಾಣಿಸುವಾಗ ಯಾವುದೇ ಸಂಗೀತವನ್ನು ನುಡಿಸಬಾರದು ಎಂದು ತಿಳಿಸಲಾಗಿದೆ. ಇತರ ಸಹ ಪ್ರಯಾಣಿಕರ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ. ರೈಲುಗಳ ಒಳಗೆ ಸಂಗೀತವನ್ನು ನುಡಿಸಬಾರದು. ಇತರ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ. ಆದರೆ, ನಿಯಮ ಉಲ್ಲಂಘಿಸಿದರೆ ಶಿಕ್ಷೆಯಾಗುತ್ತದೆಯೇ ಎಂಬುದನ್ನು ಪರ್ವೇಜ್ ಸ್ಪಷ್ಟಪಡಿಸಿಲ್ಲ.

ರೈಲಿನಲ್ಲಿ ಪ್ರಯಾಣಿಸುವಾಗ ವಿಧಿಸಲಾಗಿರುವ ಹಲವು ನಿರ್ಬಂಧಗಳಲ್ಲಿ ಜೋರಾಗಿ ಸಂಗೀತ ನುಡಿಸಲು ಅವಕಾಶ ನೀಡದಿರುವುದು ಕೂಡ ಒಂದಾಗಿದೆ. ಇತ್ತೀಚಿಗೆ, ನಮ್ಮ ಮೆಟ್ರೋವು ರೈಲುಗಳಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಸಾರ್ವಜನಿಕ ಜಾಗೃತಿಯನ್ನು ಮೂಡಿಸುತ್ತಿದೆ. ಅವುಗಳಲ್ಲಿ ಕೆಲವು, ಆಹಾರ ಸೇವನೆಯ ಮೇಲಿನ ನಿರ್ಬಂಧಗಳು, ರೈಲು ಹತ್ತುವಾಗ ಲೈನ್ ವ್ಯವಸ್ಥೆಯನ್ನು ಪಾಲಿಸುವುದು ಇತ್ಯಾದಿ.

ಇನ್ನು ಬಿಎಂಆರ್‌ಸಿಎಲ್ ನ ಈ ನಿರ್ಧಾರವನ್ನು ಸಿಟಿಜನ್ಸ್ ಫಾರ್ ಸಿಟಿಜನ್ಸ್‌ನ ಸಂಸ್ಥಾಪಕ ಮತ್ತು ಸಂಚಾಲಕ ರಾಜ್‌ಕುಮಾರ್ ದುಗರ್ ಶ್ಲಾಘಿಸಿದ್ದಾರೆ. ಇದು ಖಂಡಿತವಾಗಿಯೂ ಸ್ವಾಗತಾರ್ಹ ಕ್ರಮವಾಗಿದೆ. ಸಂಗೀತವನ್ನು ಇತರರಿಗೆ ಕಿರಿಕಿರಿಯಾಗದಂತೆ ಮೆಲ್ಲಗೆ ಪ್ಲೇ ಮಾಡುವುದು ಉತ್ತಮ. ಆದರೆ, ಅನೇಕರು ಸಂಗೀತವನ್ನು ಜೋರಾಗಿ ನುಡಿಸುತ್ತಾರೆ. ಇದು ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read