IPL ಇತಿಹಾಸದಲ್ಲೇ ಭುವನೇಶ್ವರ್‌ ಕುಮಾರ್‌ ಸಾರ್ವಕಾಲಿಕ ದಾಖಲೆ ; ಅತಿ ಹೆಚ್ಚು ವಿಕೆಟ್‌ ಪಡೆದ ವೇಗದ ಬೌಲರ್‌ ಎಂಬ ಹೆಗ್ಗಳಿಕೆ !

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ 2025ರ ಅಭಿಯಾನಕ್ಕೆ ಮರುಜೀವ ನೀಡಿದೆ. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರಂತಹ ಬ್ಯಾಟ್ಸ್‌ಮನ್‌ಗಳು ಮಿಂಚಿನ ಪ್ರದರ್ಶನ ನೀಡಿದರೆ, ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಐಪಿಎಲ್ ಇತಿಹಾಸದಲ್ಲಿ ಮಹತ್ವದ ದಾಖಲೆಯೊಂದನ್ನು ಮುರಿದರು.

ಭುವನೇಶ್ವರ್ ಕುಮಾರ್ ತಮ್ಮ ನಾಲ್ಕು ಓವರ್‌ಗಳಲ್ಲಿ 48 ರನ್ ನೀಡಿದ್ದರೂ, ಆರ್‌ಸಿಬಿ ವಿರುದ್ಧ ಅರ್ಧಶತಕ ಗಳಿಸಿದ್ದ ತಿಲಕ್ ವರ್ಮ ಅವರ ಪ್ರಮುಖ ವಿಕೆಟ್ ಪಡೆದರು. ಈ ವಿಕೆಟ್‌ನೊಂದಿಗೆ ಭುವನೇಶ್ವರ್ ಕುಮಾರ್ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 184 ವಿಕೆಟ್‌ಗಳನ್ನು ಪಡೆದಿದ್ದು, ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ 183 ವಿಕೆಟ್‌ಗಳನ್ನು ಪಡೆದಿದ್ದ ಡ್ವೇನ್ ಬ್ರಾವೊ ಅವರ ದಾಖಲೆಯನ್ನು ಭುವಿ ಮುರಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ವಿರಾಟ್ ಕೊಹ್ಲಿ 67 ರನ್ ಗಳಿಸಿದರೆ, ರಜತ್ ಪಾಟಿದಾರ್ 64 ರನ್ ಸಿಡಿಸಿದರು. ಜಿತೇಶ್ ಶರ್ಮಾ ಕೇವಲ 19 ಎಸೆತಗಳಲ್ಲಿ 40 ರನ್ ಗಳಿಸಿ ತಂಡದ ಮೊತ್ತವನ್ನು 221ಕ್ಕೆ ಏರಿಸಲು ನೆರವಾದರು.

222 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ರೋಹಿತ್ ಶರ್ಮಾ (17) ಮತ್ತು ರಾಯನ್ ರಿಕ್ಲೆಟನ್ (17) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಲ್ ಜಾಕ್ಸ್ (12) ಮತ್ತು ಸೂರ್ಯಕುಮಾರ್ ಯಾದವ್ (28) ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಹಾರ್ದಿಕ್ ಪಾಂಡ್ಯ (15 ಎಸೆತಗಳಲ್ಲಿ 42 ರನ್) ಮತ್ತು ತಿಲಕ್ ವರ್ಮ (29 ಎಸೆತಗಳಲ್ಲಿ 56 ರನ್) ಹೋರಾಟ ನಡೆಸಿದರೂ, ಇಬ್ಬರೂ ಮೂರು ಎಸೆತಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಆರ್‌ಸಿಬಿ ಪರವಾಗಿ ಕೃನಾಲ್ ಪಾಂಡ್ಯ ನಾಲ್ಕು ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್ ಕಬಳಿಸಿದರು. ಈ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಕಳೆದ ಆರು ಪಂದ್ಯಗಳಲ್ಲಿ ಸೋತ ನಂತರ ಇದೇ ಮೊದಲ ಜಯ ಸಾಧಿಸಿದ್ದು ವಿಶೇಷವಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read