ನವದೆಹಲಿ: ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ (DPR) ಎರಡು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವ ಪ್ರಶ್ನೆ ಇಲ್ಲ ಎಂಬುದನ್ನು ಒತ್ತಿ ಹೇಳಿದರು.
ಈ ವರ್ಷಾಂತ್ಯಕ್ಕೆ ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಇಡೀ ಕಾರ್ಖಾನೆಯನ್ನು ಹೊಸದಾಗಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಯೋಜನೆಗೆ ವರ್ಷಾಂತ್ಯದಲ್ಲಿ ಅಡಿಗಲ್ಲು ಹಾಕಲಿದ್ದಾರೆ ಎಂದು ಹೇಳಿದರು.
ಇಡೀ ಕಾರ್ಖಾನೆಯನ್ನು ಹೊಸದಾಗಿ ಮರು ನಿರ್ಮಾಣ ಮಾಡಬೇಕಿದೆ. ಸುಮಾರು ₹8000ರಿಂದ 10,000 ಕೋಟಿ ಹೂಡಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಆ ಕಾರ್ಖಾನೆ ಭಾರತೀಯ ಉಕ್ಕು ಪ್ರಾಧಿಕಾರದ (SAIL) ಅಧೀನದಲ್ಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರದಲ್ಲಿ ಉಕ್ಕು ಕ್ಷೇತ್ರದಲ್ಲಿ ಪ್ರಾಧಿಕಾರ ಒಂದು ಲಕ್ಷ ಕೋಟಿ ಮೊತ್ತ ಹೂಡಿಕೆ ಮಾಡಲಿದೆ. ಅದೇ ಸಂದರ್ಭದಲ್ಲಿ ವಿಐಎಸ್ ಎಲ್ ಕಾರ್ಖಾನೆಯನ್ನು ಕೂಡ ಪುನಶ್ಚೇತನಗೊಳಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶೀಯವಾಗಿ ವಾರ್ಷಿಕ 300 ದಶಲಕ್ಷ ಟನ್ ಸ್ಟೀಲ್ ಉತ್ಪಾದನೆ ಗುರಿ ನಿಗದಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸರಕಾರಿ ಸ್ವಾಮ್ಯದಲ್ಲಿರುವ ಉಕ್ಕು ಸ್ಥಾವರಗಳನ್ನು ಬಲಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಂತೆಯೇ ಕರ್ನಾಟಕಕ್ಕೆ 4,500 ಎಲೆಕ್ಟ್ರಿಕ್ ಬಸ್ ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು. ಕರ್ನಾಟಕದ ಮಟ್ಟಿಗೆ ದೊಡ್ಡ ತೀರ್ಮಾನ ಮಾಡಿದ್ದೇವೆ. ಪಿಎಂ ಇಡ್ರೈವ್ ಯೋಜನೆ ಅಡಿ ಬಸ್ ಗಳನ್ನು ನೀಡುತ್ತಿದ್ದೇವೆ. 2030ರ ವೇಳೆಗೆ ಭೂಸಾರಿಗೆ ಮಾಲಿನ್ಯವನ್ನು ಶೂನ್ಯಮಟ್ಟಕ್ಕೆ ಇಳಿಸಬೇಕು ಎನ್ನುವ ಉದ್ದೇಶವನ್ನು ಪ್ರಧಾನಿಗಳು ಹೊಂದಿದ್ದಾರೆ. ಅವರ ಕನಸು ಸಾಕಾರಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.