ಮನೆ ಬಾಡಿಗೆದಾರರಿಗೆ ಬಿಗ್‌ ಶಾಕ್:‌ ಸಿಲಿಕಾನ್‌ ಸಿಟಿಯಲ್ಲಿ ಈ ವರ್ಷ ಏರಿಕೆಯಾಗಿದೆ ಶೇ.30 ರಷ್ಟು ಬಾಡಿಗೆ…!

ಕೋವಿಡ್ ಸಮಯದಲ್ಲಿ ಖಾಲಿ ಇದ್ದ ಬೆಂಗಳೂರಿನ ಮನೆಗಳೆಲ್ಲಾ ಇಂದು ತುಂಬಿಹೋಗಿವೆ. ಬಾಡಿಗೆದಾರರಿಲ್ಲದೇ ಖಾಲಿ ಉಳಿದಿದ್ದ ಮನೆಗಳಿಗೆ ಬೇಡಿಕೆ ಬರ್ತಿದ್ದು ಇದು ಬಾಡಿಗೆದಾರರ ಜೇಬಿಗೆ ಕತ್ತರಿ ಹಾಕಿದೆ. 2023 ರಲ್ಲಿ ಬೆಂಗಳೂರಲ್ಲಿ ಬಾಡಿಗೆ ಮನೆಗಳ ಬೆಲೆಯಲ್ಲಿ ಏರಿಕೆಯಾಗಿರುವುದನ್ನ 2 ಸ್ವತಂತ್ರ ಸಮೀಕ್ಷೆಗಳು ಕಂಡುಕೊಂಡಿವೆ. ನೋ ಬ್ರೋಕರ್ಸ್ ರಿಯಲ್ ಎಸ್ಟೇಟ್ ರಿಪೋರ್ಟ್ 2023 ಮತ್ತು ಕನ್ಸಲ್ಟೆನ್ಸಿ ವೇದಿಕೆ ಅನಾರಾಕ್ ಪ್ರಕಾರ, ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಮನೆ ಬಾಡಿಗೆ ಶೇಕಡಾ 30 ರಷ್ಟು ಹೆಚ್ಚಾಗಿದೆ.

ಬೆಂಗಳೂರು ಮತ್ತು ಮುಂಬೈನಲ್ಲಿನ ಏಳು ಪ್ರತಿಶತ ಭೂಮಾಲೀಕರು 2023 ರಲ್ಲಿ ಬಾಡಿಗೆಯನ್ನು ಶೇಕಡಾ 30 ರಷ್ಟು ಹೆಚ್ಚಿಸಿದ್ದಾರೆ ಎಂದು ನೋ ಬ್ರೋಕರ್ ಹೇಳಿದೆ. ಬೆಂಗಳೂರಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 52 ರಷ್ಟು ಭೂಮಾಲೀಕರು ಬಾಡಿಗೆಯಿಂದ ಬರುವ ಆದಾಯವನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ.

ಮತ್ತೊಂದೆಡೆ ಅನರಾಕ್ ವರದಿಯ ಪ್ರಕಾರ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿ 2023 ರ ಮೊದಲ ಒಂಬತ್ತು ತಿಂಗಳಲ್ಲಿ ಗರಿಷ್ಠ ಬಾಡಿಗೆ ಹೆಚ್ಚಳವಾಗಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದ ಸಲಹೆಗಾರರ ಸಂಶೋಧನೆಗಳ ಪ್ರಕಾರ ಸುಮಾರು 1,000 ಚದರ ಅಡಿಗಳ ಪ್ರಮಾಣಿತ 2BHK ಫ್ಲಾಟ್ ಹೊಂದಿರುವ ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಶೇ 31 ರಷ್ಟು ಬಾಡಿಗೆ ಹೆಚ್ಚಳವಾಗಿದೆ. ಸರ್ಜಾಪುರದಲ್ಲಿ ಅಂತಹ ಮನೆಗಳ ಬಾಡಿಗೆ ಶೇಕಡಾ 27 ರಷ್ಟು ಹೆಚ್ಚಾಗಿದೆ.

ಬಾಡಿಗೆಯಲ್ಲಿ ಹಠಾತ್ ಏರಿಕೆಯನ್ನು ವಿವರಿಸುತ್ತಾ, ನೋ ಬ್ರೋಕರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವ್ಯಾಪಾರ ಅಧಿಕಾರಿ ಸೌರಭ್ ಗಾರ್ಗ್ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿ, ಕೋವಿಡ್ ಸಾಂಕ್ರಾಮಿಕವು ವಸತಿ ಆಸ್ತಿಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು. “ಹೆಚ್ಚು ಜನರು ನಗರವನ್ನು ಪ್ರವೇಶಿಸುವುದರಿಂದ ಮತ್ತು ಕಡಿಮೆ ಸ್ಥಳಾವಕಾಶಗಳು ಲಭ್ಯವಿರುವುದರಿಂದ, ಬೆಂಗಳೂರಿನಲ್ಲಿ ಬಾಡಿಗೆ ಹೆಚ್ಚಾಗಿದೆ. 2023 ರಲ್ಲಿ ಭಾರತೀಯ ರಿಯಲ್ ಎಸ್ಟೇಟ್ ಕ್ಷೇತ್ರವು ಪ್ರಾಪರ್ಟಿ ಖರೀದಿಗೆ ಹೆಚ್ಚುತ್ತಿರುವ ಬೇಡಿಕೆ, ಹೆಚ್ಚುತ್ತಿರುವ ಬಾಡಿಗೆಗಳು ಮತ್ತು ಪ್ರಾಪರ್ಟಿ ಬೆಲೆಗಳು, ವಿಶೇಷವಾಗಿ ಬೆಂಗಳೂರಿನಲ್ಲಿ ದೃಢವಾದ ಬೆಳವಣಿಗೆಯನ್ನು ಕಂಡಿದೆ”ಎಂದರು.

ದೆಹಲಿ NCR, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಂತಹ ಇತರ ನಗರಗಳಲ್ಲೂ ಬಾಡಿಗೆಯು ಶೇ 9 ರಿಂದ ಶೇ. 14 ರವರೆಗೆ ಹೆಚ್ಚಳವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read