15 ವರ್ಷಗಳಿಂದ ಪೊಲೀಸನಂತೆ ನಟನೆ ; ಪ್ರೇಮಿಗಳಿಗೆ ಬೆದರಿಕೆ ಹಾಕುತ್ತಿದ್ದವನು ಕೊನೆಗೂ ಅಂದರ್ !

ಬೆಂಗಳೂರಿನ ಕೆರೆಗಳು ಮತ್ತು ಉದ್ಯಾನವನಗಳ ಬಳಿ ಕಾರುಗಳಲ್ಲಿ ಏಕಾಂತ ಬಯಸುತ್ತಿದ್ದ ಪ್ರೇಮಿಗಳಿಗೆ 15 ವರ್ಷಗಳಿಂದ ಬೆದರಿಕೆ ಹಾಕುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 42 ವರ್ಷದ ಆಸಿಫ್ ಖಾನ್ ಅಲಿಯಾಸ್ ಪಿಸ್ತೋ ಬಂಧಿತ ಆರೋಪಿ. ಗಂಗಾನಗರದ ನಿವಾಸಿಯಾಗಿದ್ದ ಆಸಿಫ್ ಖಾನ್, ಪಾರ್ಟ್ ಟೈಂ ಆಟೋ ಚಾಲಕನಾಗಿದ್ದ. 10ನೇ ತರಗತಿಯಲ್ಲಿ ಅನುತ್ತೀರ್ಣನಾದ ಆಸಿಫ್ ಖಾನ್, ಪ್ರೇಮಿಗಳಿಗೆ ನೈತಿಕ ಪೊಲೀಸ್ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಪ್ರೇಮಿಗಳನ್ನು ಸಮೀಪಿಸಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಆರೋಪಿಸುತ್ತಿದ್ದ. ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ.

2018ರಲ್ಲಿ ಆಸಿಫ್ ಖಾನ್‌ನನ್ನು ಬಂಧಿಸಲಾಗಿತ್ತು. ಆದರೂ, ಆತ ತನ್ನ ದಂಧೆಯನ್ನು ಮುಂದುವರೆಸಿದ್ದ. ಮಾರ್ಚ್ 5ರಂದು, ಜಯನಗರದ ಆರ್ ವಿ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಕುಳಿತಿದ್ದ 41 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿ ಮತ್ತು ಆತನ ಮಹಿಳಾ ಸಹೋದ್ಯೋಗಿಯನ್ನು ಗುರಿಯಾಗಿಸಿಕೊಂಡಿದ್ದ. ಆಸಿಫ್ ಖಾನ್, ದ್ವಿಚಕ್ರ ವಾಹನದಲ್ಲಿ ಬಂದು ಅವರನ್ನು ತಡೆದು ತಪ್ಪು ಮಾಡುತ್ತಿದ್ದೀರಿ ಎಂದು ಆರೋಪಿಸಿ ವ್ಯಕ್ತಿಯನ್ನು ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದ. ಬಳಿಕ, 12 ಗ್ರಾಂ ಚಿನ್ನದ ಸರ ಮತ್ತು 5 ಗ್ರಾಂ ಉಂಗುರವನ್ನು ದೋಚಿದ್ದ. ನಂತರ, ಎಟಿಎಂನಿಂದ 10,000 ರೂಪಾಯಿಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ.

ಈ ಬಗ್ಗೆ ಸಂತ್ರಸ್ತರು ಅಂದೇ ರಾತ್ರಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಮಾರ್ಚ್ 9ರಂದು ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಪೊಲೀಸರು ಕಳೆದ ವರ್ಷದ ಒಂದು ಪ್ರಕರಣ ಸೇರಿದಂತೆ ಕನಿಷ್ಠ ಮೂರು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಆಸಿಫ್ ಖಾನ್ ವಿರುದ್ಧ ವರ್ಷಗಳಿಂದ 19 ದೂರುಗಳು ದಾಖಲಾಗಿದ್ದವು.

ಪೊಲೀಸರು ಆಸಿಫ್ ಖಾನ್‌ನಿಂದ 80 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆತ ಕದ್ದಿರುವ ಇತರ ವಸ್ತುಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಆಸಿಫ್ ಖಾನ್‌ನಿಂದ ಬೆದರಿಕೆಗೊಳಗಾದವರು ಜಯನಗರ ಪೊಲೀಸ್ ಠಾಣೆಗೆ ಅಥವಾ ಹತ್ತಿರದ ಪೊಲೀಸ್ ಹೊರಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read