ಬೆಂಗಳೂರು: ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಪ್ರಾರಂಭವಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಈ ಹಿಂದೆ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಟೋಯಿಂಗ್ ಮಾಡುತ್ತಿದ್ದೆವು. ಈಗ ಮತ್ತೆ ಟೋಯಿಂಗ್ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ಸ್ ಗಳನ್ನು ಬಳಸಿಕೊಂಡು ವಾಹನಗಳ ಟೋಯಿಂಗ್ ಮಾಡಲಾಗುವುದು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ಸಪೂರ್ಣ ಮಾಹಿತಿ ಪಡೆದಿದ್ದೇನೆ. ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು.
ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಬೆಂಗಳೂರು ನಗರದಲ್ಲಿ 9000 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ನಗರದಲ್ಲಿ 30 ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿದ್ದೇವೆ. ರಾತ್ರಿ ವೇಳೆ ಮಹಿಳೆಯರು ಓಡಾಡುವ ಡಾರ್ಕ್ ಏರಿಯಾಗಳಲ್ಲಿ ಹೆಚ್ಚು ಗಮನ ಹರಿಸುತ್ತೇವೆ. ನಿರ್ಭಯ ಯೋಜನೆಯಡಿ ಕೇಂದ್ರ ಸರ್ಕಾರ 667 ಕೋಟಿ ಹಣ ನೀಡಿದ್ದು, ಈ ಹಣವನ್ನು ಮಹಿಳೆಯರ ಸುರಕ್ಷತೆಗಾಗಿ ಖರ್ಚು ಮಾಡಲಾಗಿದೆ. ಬೆಂಗಳೂರು ಸುರಕ್ಷಿತ ನಗರಗಳಲ್ಲಿ ಒಂದು ಎಂದು ಹೈದರಾಬಾದ್ ನ ಸಂಸ್ಥೆಯೊಂದು ವರದಿ ನೀಡಿದೆ. ಇನ್ನೂ ಹೆಚ್ಚಿನ ಪರಿಣಾಮಕಾರಿ ಕೆಲಸಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.