ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ರಾತ್ರಿಯಿಡಿ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಗುಂಡಿ ಬಿದ್ದ ರಸ್ತೆಗಳಲ್ಲಿ ನೀರು ತುಂಬಿ ನಿಂತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಮರಗಳು ಧರಾಶಾಹಿಯಾಗಿವೆ.
ಬಿರುಗಾಳಿ ಮಲೆಯಿಂದಾಗಿ ಬೆಂಗಳೂರಿನ ಹಲವೆಡೆ 30ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದಿವೆ. ಇದರಿಂದಾಗಿ ರಸ್ತೆ ಸಂಚಾರ ಬಂದ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದ್ದು, ಇಂದು ಬೆಳಿಗ್ಗೆ ಮರ ತೆರವು ಕಾರ್ಯ ನಡೆಯುತ್ತಿದೆ. ಆದರೆ ವಾಹನ ಸಂಚಾರ ಸಾಧ್ಯವಾಗದೆ ಟ್ರಾಫಿಕ್ ಜಾಮ್ ನಿಂದ ಸಾರ್ವಜನಿಕರು ಪರದಾಡಿದ್ದಾರೆ.
ರಾಮಮೂರ್ತಿ ನಗರದ ಬಳಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಹೊರಮಾವು ಕಡೆಗೆ ಹೋಗುವವರು ಸಂಕಷ್ಟಕ್ಕೀಡಾಗಿದ್ದಾರೆ. ವೇಮನ ವೃತ್ತದ ಬಳಿ ಮರ ಬಿದ್ದ ಪರಿಣಾಮ ಬಾಣಸವಾಡಿ ಕಡೆಗೆ ತೆರಳುವ ಪ್ರದೇಶದಲ್ಲಿ ಸಂಚಾರ ದಟ್ಟಣೆಯುಂಟಾಗಿದೆ. ಮಳೆ ಸಂಬಂಧಿತ ಅವಾಂತರದಿಂದಾಗಿ ಬೆಂಗಳೂರು ನಗರದಲ್ಲಿ ಬೆಳಿಗ್ಗೆ ಕಚೇರಿಗಳಿಗೆ ಹೋಗುವವರು ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಪರದಾಡುವಂತಾಗಿದೆ.