ಗದಗ: ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಬಸವರಾಜ್ ಬೊಮ್ಮಾಯಿ, ‘ಬ್ರ್ಯಾಂಡ್ ಬೆಂಗಳೂರು ಅಲ್ಲ, ಗುಂಡಿ ಬೆಂಗಳೂರು’ ಆಗಿದೆ ಎಂದು ಕಿಡಿಕಾರಿದ್ದಾರೆ.
ಗದಗದಲ್ಲಿ ಮಾತನಾಡಿದ ಬಿಜೆಪಿ ಸಂಸದ ಬೊಮ್ಮಾಯಿ, ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ ಭಾರಿ ಸಮಸ್ಯೆಯಾಗಿದೆ. ಕಳೆದ ಎರಡು ವರ್ಷಗಳಿಂದ ಅತಿಹೆಚ್ಚು ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳು ಗುಂಡಿಬಿದ್ದಿವೆ. ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿಲ್ಲ, ಗುಂಡಿಗಳಲ್ಲಿ ರಸ್ತೆಯಿದೆ ಎನ್ನುವಂತಾಗಿದೆ ಎಂದರು.
ಬೆಂಗಳೂರಿನಲ್ಲಿ ಸುಮಾರು 5000 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಅಂತಾರೆ. ಇನ್ನೂ 5000ಕ್ಕೂ ಹೆಚ್ಚು ರಸ್ತೆಗುಂಡಿಗಳಿವೆ. ಶಾಲಾ ಮಕ್ಕಳು ಕೂಡ ರಸ್ತೆಗುಂಡಿಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಸ್ ನಲ್ಲಿ ಶಾಲೆಗೆ ಹೋಗಿಬರಲು ಮೈಕೈ ನೋವಾಗುತ್ತಿದೆ ಅಂತಿದ್ದಾರೆ. ಉದ್ಯಮಿಗಳು ಮಾತ್ರವಲ್ಲ, ಇಡೀ ಬೆಂಗಳೂರಿನ ಜನತೆ ಸುಸ್ತಾಗಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಬಿಟ್ಟು, ಗುಂಡಿಗಳ ಬೆಂಗಳೂರು ಆಗಿದೆ ಎಂದು ಕಿಡಿಕಾರಿದರು.
ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು. ಸಿಎಂ ಸಿದ್ದರಾಮಯ್ಯನವರೇ ಬಾಯಿ ಮಾತಿನಲ್ಲಿ ಹೇಳಿದರೆ ಅಭಿವೃದ್ಧಿಯಾಗಲ್ಲ, ಅತಿ ಹೆಚ್ಚು ತೆರಿಗೆ ಕೊಡುವ ಬೆಂಗಳೂರಿನ ರಸ್ತೆ ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ಉದ್ಯಮಿಗಳು, ವಿದ್ಯಾರ್ಥಿಗಳು ಬೆಂಗಳೂರು ಬಿಟ್ಟುಹೋಗ್ತಾರೆ ಎಂದು ಗುಡುಗಿದ್ದಾರೆ.