ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು, ಅಪಪ್ರಚಾರದ ವಿಡಿಯೋಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಹಳೇ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬೆಂಗಳೂರಿನಲ್ಲಿ ನಡೆದಿದೆ ಎಂದು ಪೋಸ್ಟ್ ಮಾಡಿದ್ದ ಯುವತಿಯೊಬ್ಬಳನ್ನು ಬಂಧಿಸಿರುವ ಘಟನೆ ಪುಲಕೇಶಿನಗರದಲ್ಲಿ ನಡೆದಿದೆ.
ಕೋಣನಕುಂಟೆ ನಿವಾಸಿ ಶಹಾ ಜಹಾನ್ (36) ಎಂಬ ಯುವತಿಯನ್ನು ಬಂಧಿಸಿ, ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಶಹ ಜಹಾನ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವೈರಲ್ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಳು. ಅದೇ ರೀತಿ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಹಳೆಯ ಘಟನೆಯೊಂದರ ವಿಡಿಯೋವನ್ನು ಹಂಚಿಕೊಂಡು ಬೆಂಗಳೂರಿನಲ್ಲಿ ರೌಡಿಗಳ ಪುಂಡಾಟ ಎಂಬ ಶೀರ್ಷಿಕೆ ನೀಡಿದ್ದಳು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಹ ಜಹಾನ್ ಳನ್ನು ಪತ್ತೆ ಮಾಡಿದ ಪೊಲೀಸರು ವಿವರಣೆ ಕೇಳಿದ್ದಾರೆ. ಈ ವೇಳೆ ಆಕೆ ಪರಿಶೀಲಿಸದೇ ಹಳೇ ವಿಡಿಯೋವನ್ನು ಬೆಂಗಳೂರಿನಲ್ಲಿ ನಡೆದಿದೆ ಎಂದು ವಿಡಿಯೋ ಅಪ್ ಲೋಡ್ ಮಾಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಯುವತಿಯನ್ನು ವಶಕ್ಕೆ ಪಡೆದು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.