ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವೆಡೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು 12.48 ಕೋಟ್ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ದೆಹಲಿ ಹಾಗೂ ಹರ್ಯಾಣದ ಗುರುಗ್ರಾಮದ ಹಲವು ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಗಣಿಗಾರರು, ಅದಿರು ಸಾಗಣೆದಾರರು, ಬಂದರು ಹಾಗೂ ಹಡಗು ಕಂಪನಿಗಳು, ರಫ್ತುದಾರರು ಸೇರಿದಂತೆ ಬೃಹತ್ ಜಾಲವೇ ಅದಿರು ಕಳ್ಳಸಾಗಣೆಯಲ್ಲಿ ಪಾಲ್ಗೊಂಡಿದೆ. ಇದರಿಂದ ರಾಜ್ಯದ ಖಜಾನೆಗೆ ಅಪಾರ ನಷ್ಟವುಂಟುಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ತನಿಖೆ ಭಾಗವಾಗಿ ಅಕ್ಟೋಬರ್ 15ರಂದು ಬೆಂಗಳೂರು, ಹೊಸಪೇಟೆ, ದೆಹಲಿ, ಗುರುಗ್ರಾಮ ಸೇರಿದಂತೆ ಹಲವೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಹಲವು ಕಂಪ್ಯೂಟರ್, ಹಾರ್ಡ್ ಡಿಸ್ಕ್, 42 ಲಕ್ಷ ನಗದು ಜಪ್ತಿ ಮಾಡಿದ್ದರು. ಇದೀಗ ಬೇಲೇಕೆರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು 12.48 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ತಿಳ್ಳಿದುಬಂದಿದೆ.