ಬೆಳಗಾವಿ: 15 ಸಾವಿರ ಸಾಲದ ಹಣ ವಾಪಾಸ್ ಕೊಡುವಂತೆ ಹೇಳಿದ್ದಕ್ಕೆ ತಾಯಿ-ಮಗಳು-ಅಪ್ರಾಪ್ತ ಮಗ ಸೇರಿ ಮಹಿಳೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಂಜನಾ ದಡ್ಡಿಕರ್ ಹತ್ಯೆಯಾದ ಮಹಿಳೆ. ಗಣೇಶ್ ಪುರದ ಅಪಾರ್ಟ್ ಮೆಂಟ್ ನಲ್ಲಿ ಅಂಜನಾ ಅವರನ್ನು ಏ.22ರಂದು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಕೆಲಸ ಮುಗಿಸಿ ಪತಿ ಮನೆಗೆ ಹಿಂದಿರುಗಿದಾಗಲೇ ಪತ್ನಿ ಕೊಲೆಯಾಗಿರುವುದು ಗೊತ್ತಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ. ಜ್ಯೋತಿ ಬಾಂದೇಕರ್, ಮಗಳು ಸುಹಾನಿ ಬಾಂದೇಕರ್ ಹಾಗೂ ಜ್ಯೋತಿ ಅಪ್ರಾಪ್ತ ಮಗನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಣ ವಾಪಾಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಂದು ಬಳಿಕ ಪೊಲೀಸರ ದಿಕ್ಕುತಪ್ಪಿಸಲು ಮೃತ ಮಹಿಳೆಯ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು.